ಚಿತ್ರದುರ್ಗ ನ.11 : ಹೈದರಾಲಿಯ ಸೈನ್ಯದ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡಿ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವ ವೀರತ್ವ, ಕರ್ತವ್ಯಪ್ರಜ್ಞೆ ಹಾಗೂ ಸ್ವಾಮಿನಿಷ್ಠೆ ಮೆರೆಯುವ ಮೂಲಕ ದೇಶಕ್ಕೆ ನಾಡಿನ ಕೀರ್ತಿಯನ್ನು ಹೆಚ್ಚಿಸಿ ಓಬವ್ವ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ತ.ರಾ.ಸು. ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಸಮಾರಂಭದಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಛಲವಾದಿ ಸಮುದಾಯದಲ್ಲಿ ಜನ್ಮ ತಾಳಿದ ಒನಕೆ ಓಬವ್ವ ಯಾವುದೇ ರೀತಿಯ ಶಿಕ್ಷಣ, ಯುದ್ಧ ತರಬೇತಿ ಪಡೆದಿಲ್ಲ. ಸಾಮಾನ್ಯ ಮಹಿಳೆ ಅಸಾಮಾನ್ಯ ಸ್ಥಾನಕ್ಕೇರಿದ ಮಹಾತಾಯಿ ಒನಕೆ ಓಬವ್ವ. ಹೈದರಾಲಿಯ ಸೈನ್ಯ ಕೋಟೆಯನ್ನು ಪ್ರವೇಶ ಮಾಡಿದಂತಹ ಸಂದರ್ಭದಲ್ಲಿ ಕೋಟೆಯ ರಕ್ಷಣೆ, ಸ್ವಾಮಿ ನಿಷ್ಠೆ, ವೀರತ್ವದಿಂದ ಹೈದರಾಲಿಯ ಸೈನ್ಯವನ್ನು ಏಕಾಂಗಿಯಾಗಿ ಹೋರಾಟ ಮಾಡಿ, ಕೋಟೆ ಸಂರಕ್ಷಣೆಗೆ ಒನಕೆ ಓಬವ್ವ ತನ್ನದೇಯಾದ ಕಾಣಿಕೆ ನೀಡಿದ್ದಾರೆ. ಪ್ರಾಣದ ಹಂಗನ್ನು ತೋರೆದು ಹೋರಾಟದ ಮಾಡಿದ ವೀರವನಿತೆ ಒನಕೆ ಓಬವ್ವ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಕೋಟೆ ಸಂರಕ್ಷಣೆಗಾಗಿ ಹೋರಾಟ ಮಾಡಿದ ಒನಕೆ ಓಬವ್ವ ಸಾಧನೆ, ಸಾಹಸ, ಧೈರ್ಯ ಇಂದಿಗೂ ಸ್ಥಿರಸ್ಥಾಯಿಯಾಗಿ ಉಳಿದಿದೆ. ಕೋಟೆ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒನಕೆ ಓಬವ್ವ ತ್ಯಾಗ ಮಾಡಿದ್ದಾರೆ. ಸಮಾಜದಲ್ಲಿ ಸ್ವಾರ್ಥಕ್ಕಾಗಿ ಬದುಕದೇ, ಜನರಿಗೆ ಒಳ್ಳೆಯ ಕಾರ್ಯ ಮಾಡಿದರೆ ನಮಗೂ ಒಳ್ಳೆಯದಾಗಲಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಎನ್. ತಿಪ್ಪೇಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಒನಕೆ ದುರ್ಗದ ರಕ್ಷಕಿ ಎಂದು ಪ್ರಸಿದ್ಧ ಪಡೆದಿದ್ದಾರೆ. ವಿ.ಡಿ.ಕೃಷ್ಣ ಅವರು ಓಬವ್ವ ಅವರ ಕುರಿತು ಬರೆಯದಿದ್ದರೆ ಗತಕಾಲದಲ್ಲಿ ಹುದುಗಿಹೋಗುತ್ತಿತ್ತು. ಲಕ್ಷ್ಮಣ್ ತೆಲಗಾವಿ ಅವರು ಚಿತ್ರದುರ್ಗದ ಇತಿಹಾಸವನ್ನು ಚಂದ್ರವಳ್ಳಿ ಪುಸ್ತಕದಲ್ಲಿ ಆಕೆಯ ಶೌರ್ಯ, ಸಾಹಸವನ್ನು ವಿವರಿಸಿದ್ದಾರೆ. ಛಲವಾದಿ ಸಮುದಾಯ ಪ್ರಾಮಾಣಿಕ, ಸ್ವಾವಲಂಬಿ, ಗೌರವಯುತವಾಗಿ ಬಾಳಿ ಬದುಕಿದ್ದಾರೆ ಎಂಬುವುದು ವಿಶೇಷ. ಹೈದರಾಲಿ ಸೈನ್ಯವನ್ನು ರಣಚಂಡಿಯಂತೆ ಚಂಡಾಡಿದ ವೀರ ಮಹಿಳೆ ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು.
ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್‍ನ ಬಸವ ನಾಗೀದೇವ ಸ್ವಾಮೀಜಿ ಮಾತನಾಡಿ, ಮದಕರಿ ನಾಯಕ, ಒನಕೆ ಓಬವ್ವ ಅವರ ಕೊಡುಗೆ ಚಿತ್ರದುರ್ಗ ಇತಿಹಾಸದಲ್ಲಿ ಅವಿಸ್ಮರಣೀಯ. ಹೈದರಾಲಿಯ ಸೈನ್ಯವನ್ನು ತನ್ನ ಒನಕೆಯಿಂದ ಒಡೆದು ರಕ್ತದ ಕೊಡಿಯನ್ನು ಹರಿಸಿದವರು ಓಬವ್ವ. ರಾಷ್ಟ್ರದ ಅಭಿವೃದ್ಧಿಗೆ ಯಾರು ದುಡಿಯುತ್ತಾರೋ ಅವರು ಉತ್ಕøಷ್ಠ ನಾಗರಿಕರಾಗಿ ಬೆಳೆಯುತ್ತಾರೆ ಎಂದು ತಿಳಿಸಿದ ಅವರು ಇಂದಿನ ಯುವ ಜನತೆ ವಿದ್ಯಾಭ್ಯಾಸ ಜೊತೆಗೆ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಮಹಿಳೆಯರು ಅಭೂತಪೂರ್ವ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಛಲವಾದಿ ಸಮಾಜದ ಮುಖಂಡರಾದ ನಗರಸಭಾ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ದಾವಣಗೆರೆ ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಸದಸ್ಯೆ ಎನ್.ಬಿ.ಭಾರ್ಗವಿ ದ್ರಾವಿಡ್, ಶೇಷಪ್ಪ, ಹೆಚ್.ಗುರುಮೂರ್ತಿ, ರವಿಕುಮಾರ್, ಜಯರಾಮ್, ಡಾ.ತಿಪ್ಪೇಸ್ವಾಮಿ, ಅಣ್ಣಪ್ಪಸ್ವಾಮಿ, ಚನ್ನಬಸಪ್ಪ, ದಯಾನಂದ, ಸುವರ್ಣಮ್ಮ, ಸುನೀಲ್ ಕುಮಾರ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಪೌರಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಸಿದ್ದಯ್ಯನಕೋಟೆಯ ನುಂಕೇಶ್ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು.
ಅದ್ದೂರಿ ಮೆರವಣಿಗೆ: ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಶನಿವಾರ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಕೋಟೆ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಬಳಿಕ ಆನೆಬಾಗಿಲು, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಓಬವ್ವ ವೃತ್ತ ತಲುಪಿತು. ಓಬವ್ವ ವೃತ್ತದಲ್ಲಿ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಒನಕೆ ಓಬವ್ವ ಅವರ ಪ್ರತಿಮೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಮೆರವಣಿಗೆಯು ಮದಕರಿ ವೃತ್ತ ಮೂಲಕ ತ.ರಾ.ಸು. ರಂಗಮಂದಿರ ತಲುಪಿತು.
ಮೆರವಣಿಗೆಯಲ್ಲಿ ಕಹಳೆ ವಾಹನ, ಡೋಲು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್‍ನ ಬಸವ ನಾಗೀದೇವ ಸ್ವಾಮೀಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ತಹಶೀಲ್ದಾರ್ ಡಾ.ನಾಗವೇಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಸಮಾಜದ ಮುಖಂಡರಾದ ನಿರಂಜನಮೂರ್ತಿ, ಭಾರ್ಗವಿ ದ್ರಾವಿಡ್, ತಿಪ್ಪೇಸ್ವಾಮಿ, ಶಂಕರ್ ಸೇರಿದಂತೆ ಮತ್ತಿತರರು ಇದ್ದರು.