ಇತ್ತಿಚಿನ ದಿನಗಳಲ್ಲಿ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂಬಂತೆ ಆಗಿ ಹೋಗಿದೆ ಎಲ್ಲರ ಅಭ್ಯಾಸ. ದೊಡ್ಡವರು ಮಾತ್ರವಲ್ಲ ಒಂದು ವರ್ಷದ ಮಗುವಿಗೂ ಮೊಬೈಲ್ ಬೇಕೆ ಬೇಕು. ಮೊಬೈಲ್ ನಲ್ಲಿ ವಿಡಿಯೋ ನೋಡೊದರೇನೆ ಊಟ ಸೇರುವುದು, ನೆಮ್ಮದಿಯಾಗಿ ಇರುವುದಕ್ಕೆ ಆಗುವುದು ಎಂಬಂತೆ ಆಗೋಗಿದೆ. ಪೋಷಕರು ಅಷ್ಟೇ ಸುಲಭವಾಗಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಮಾಧಾನ ಮಾಡಿ ಬಿಡುತ್ತಾರೆ. ಆದರೆ ಅದರಿಂದ ಅನಾಹುತವೊಂದು ಸಂಭವಿಸಿ, ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಕೇರಳದ ತಿರುವಿಲ್ವಾಮಲದಲ್ಲಿ ಈ ಘಟನೆ ನಡೆದಿದೆ. 3ನೇ ತರಗತಿ ಓದುತ್ತಿದ್ದ ಆದಿತ್ಯಶ್ರೀ ಮೃತ ಬಾಲಕಿ. ಸೋಮವಾರ ರಾತ್ರಿ ಮೊಬೈಲ್ ಅನ್ನು ಚಾರ್ಜಿಗೆ ಹಾಕಲಾಗಿದೆ. ಚಾರ್ಜ್ ಗೆ ಹಾಕಿನೇ ವಿಡಿಯೋ ನೋಡುತ್ತಾ ಕೂತಿದ್ದಾಳೆ. ವೀಡಿಯೋ ನೋಡ ನೋಡುತ್ತಿದ್ದಂತೆ ಮೊಬೈಲ್ ಬ್ಲಾಸ್ಟ್ ಆಗಿದೆ. ಬಾಲಕಿಯ ಮುಖ, ದೇಹದ ಭಾಗ ಸುಟ್ಟು ಹೋಗಿದೆ.
ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪಸಯನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರೀತಿಯ ಘಟನೆಗಳು ಸಾಕಷ್ಟು ನಡೆದಿವೆ. ಮಕ್ಕಳು ಮೊಬೈಲ್ ಬಳಕೆ ಮಾಡುವಾಗ ಅಥವಾ ದೊಡ್ಡವರೇ ಮಾಡುವಾಗಲೂ ಚಾರ್ಜಿಂಗ್ ಹಾಕದೆ ಬಳಸುವುದು ಉತ್ತಮ.