ಸುದ್ದಿಒನ್, ಚಿತ್ರದುರ್ಗ, (ಅ.30) : ಅಪೆಕ್ಸ್ ಬ್ಯಾಂಕ್ ಬಹುಮಾನ ಯೋಜನೆಯಡಿ ರಾಜ್ಯದಲ್ಲಿನ 21 ಡಿ.ಸಿ.ಸಿ ಬ್ಯಾಂಕುಗಳ ಪೈಕಿ ನಮ್ಮ ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕಿಗೆ ‘ಎ’ ವರ್ಗದ ಆಡಿಟ್ ವರ್ಗೀಕರಣದಲ್ಲಿ ಉತ್ತಮ ಕಾರ್ಯನಿರ್ವಹಣೆಗೆ ದ್ವಿತೀಯ ಬಹುಮಾನ ರೂ.2.00 ಲಕ್ಷ ನಗದು ಹಾಗೂ ಪ್ರಶಸ್ತಿ ಬಂದಿರುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಅಧ್ಯಕ್ಷ ಡಿ.ಸುಧಾಕರ್ ಹೇಳಿದರು.
ಶನಿವಾರ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ವರ್ಚುಯಲ್ ಮೂಲಕ ನಡೆದ 58 ನೇ ಸರ್ವ ಸದ್ಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯ ಆರಂಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪುನೀತ್ ರಾಜ್‍ಕುಮಾರ್ ನಿಧನ ಹೊಂದಿದ ಪ್ರಯುಕ್ತ ಇವರಿಗೆ 2 ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು.
ನಂತರ ಮಾತನಾಡಿ, ಬ್ಯಾಂಕ್ 2020-21 ನೇ ಸಾಲಿಗೆ ರೂ.169.09 ಲಕ್ಷ ಲಾಭಗಳಿಸಿರುತ್ತದೆ. ಬ್ಯಾಂಕ್ 2020-21 ನೇ ಸಾಲಿಗೆ 375 ಕೋಟಿ ಠೇವಣಿ ಸಂಗ್ರಹಣೆ ಮಾಡಿದ್ದು, 50702 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.305.00 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದೆ. ಹಾಗೂ ಶೇ.3% ಬಡ್ಡಿದರದಲ್ಲಿ 1009 ರೈತರಿಗೆ ರೂ.58.00 ಕೋಟಿ ಮದ್ಯಮಾವಧಿ ಸಾಲ ವಿತರಿಸಿದೆ. ಕೋವಿಡ್ ಸಂಕಷ್ಟದ ನಡುವೆಯು ಬ್ಯಾಂಕ್ 2020-21 ನೇ ಸಾಲಿನಲ್ಲಿ ರೂ.169.00 ಲಕ್ಷ ಲಾಭಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಬ್ಯಾಂಕಿನ ಸದಸ್ಯರಿಗೆ ಶೇ.1% ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ವರ್ಷದಲ್ಲಿ 6400 ರೈತರಿಗೆ ರೂ.375.00 ಕೋಟಿ ಬೆಳೆ ಸಾಲ, 1100 ರೈತರಿಗೆ ರೂ.65.00 ಕೋಟಿ ಮಧ್ಯಮಾವಧಿ ಸಾಲ ಹಾಗೂ ರೂ.150.00 ಕೋಟಿ ಕೃಷಿಯೇತರ ಸಾಲಗಳನ್ನು ವಿತರಿಸುವ ಗುರಿ ಹೊಂದಿದ್ದು ರೂ.2.25 ಕೋಟಿ ಲಾಭಗಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಹಾಗೂ ರೂ.425.00 ಕೋಟಿ ಠೇವಣಿ ಸಂಗ್ರಹಣೆ ಮಾಡುವ ಗುರಿ ಹೊಂದಿದ್ದು ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಬ್ಯಾಂಕಿನಲ್ಲಿ ಠೇವಣಿ ಮಾಡಲು ಕೋರಿದರು. ಇತರೆ ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳು ಠೇವಣಿಗಳ ಮೇಲೆ ನೀಡುವ ಬಡ್ಡಿ ದರಕ್ಕಿಂತ ಶೇ.0.50% ರಷ್ಟು ಹೆಚ್ಚಿಗೆ ಬಡ್ಡಿಯನ್ನು ನಮ್ಮ ಬ್ಯಾಂಕಿನಲ್ಲಿ ನೀಡಲಾಗುತ್ತಿದೆ. ಆದ್ದರಿಂದ ಸದಸ್ಯರು ಹಾಗೂ ಸಾರ್ವಜನಿಕರು ಇನ್ನೂ ಹೆಚ್ಚು ಠೇವಣಿ ಮಾಡಲು ಕೋರಿದರು. ಬ್ಯಾಂಕಿಗೆ BEST DCC BANK ಎಂದು ಪ್ರಶಸ್ತಿ ಬಂದಿರುವ ಬಗ್ಗೆ ಸಭೆಯಲ್ಲಿ ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕರು ಹಾಗೂ ನಿರ್ದೇಶಕ ಟಿ.ರಘುಮೂರ್ತಿ, ಶಾಸಕರು ಹಾಗೂ ಸರ್ಕಾರದ ನಾಮಿನಿಯಾದ ಗೂಳಿಹಟ್ಟಿ ಡಿ.ಶೇಖರ್, ಮತ್ತು ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳು ಉಪಸ್ಥಿತರಿದ್ದರು.