ಬೆಂಗಳೂರು: ಡಿ. 19: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಜ್ಞಾನಭಾರತಿ ಆವರಣದ ಮುಖ್ಯಕಚೇರಿ ಮುಂಭಾಗದಲ್ಲಿ 2000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸೇರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಘೋಷಣೆ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ವಿಶ್ವವಿದ್ಯಾಲಯ ಪ್ರಾಧ್ಯಾಪಕರು,ಶಿಕ್ಷಕೇತರ ಸಿಬ್ಬಂದಿಗಳು ಕೂಡ ಸಾಥ್ ನೀಡಿದರು.ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಯನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ದೇಶದ ಜನತೆಯ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಚಂದ್ರು ಪೆರಿಯಾರ್ ಮಾತನಾಡಿ ” ಅಮಿತ್ ಶಾ,ಸಂಘ ಪರಿವಾರದವರು ಮೊದಲಿನಿಂದಲೂ ಅಂಬೇಡ್ಕರ್‌ರನ್ನು ಖಂಡಿಸಿ ಸೈದ್ದಾಂತಿಕ ಮನೋಭಾವ ತೋರಿದ್ದಾರೆ.ಅಮಿತ್ ಶಾ ಗಡಿಪಾರಾಗಿದ್ದ ಕ್ರಿಮಿನಲ್ ಇಂದು ಸಂವಿಧಾನಿಕ ಹುದ್ದೆಯಲ್ಲಿದ್ದೇನೆ ಎಂಬ ಅಹಂನಲ್ಲಿ ಅಂಬೇಡ್ಕರ್ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ.ಅಂಬೇಡ್ಕರ್‌ರವರ ಜ್ಞಾನ ಮತ್ತು ನೈತಿಕತೆಯ ಕಾಲದೂಳಿಗೂ ಇವರಾರು ಸಮರಲ್ಲ.ಈ ದೇಶದಲ್ಲಿ ದಲಿತರು,ಅಲ್ಪಸಂಖ್ಯಾತರು,ಹಿಂದುಳಿದವರಿಗೆ ಬದುಕುವ ಹಕ್ಕು ಕೊಟ್ಟಿದ್ದು ಅಂಬೇಡ್ಕರ್‌ರವರು ಆದ್ದರಿಂದ ನಮಗೆ ಅಂಬೇಡ್ಕರ್ ದೇವರೆ,ಅಥವಾ ದೇವರಿಗಿಂತ ಹೆಚ್ಚು. ಅಮಿತ್ ಶಾ ರವರ ಈ ಹೇಳಿಕೆಯಿಂದ ದಲಿತ,ಹಿಂದುಳಿದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಆದ್ದರಿಂದ ದೇಶದ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ಗೃಹ ಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಅವರಿಗೆ ಯೋಗ್ಯತೆ ಇಲ್ಲ ಆದ್ದರಿಂದ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
“ಬಿಜೆಪಿ ಮತ್ತು ಸಂಘ ಪರಿವಾರದ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಸಂಚನ್ನು ದೇಶದಿಂದ ಹೋಗಲಾಡಿಸಲು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಟೊಂಕ ಕಟ್ಡಿ ನಿಂತಿದ್ದಾರೆ.ಈ ಉದ್ದಟತನಕ್ಕೆ ಅಮಿತ್ ಶಾ ಕ್ಷಮೆ ಕೇಳಬೇಕು ಇಲ್ಲವಾದರೆ ದೇಶಾದ್ಯಂತ ಸರಣಿ ಪ್ರತಿಭಟನೆ ನಡೆಯಲಿದೆ” ಎಂದು ಎಚ್ಚರಿಸಿದರು.
ಪ್ರತಿಭಟನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹನಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದು,ಮುಂಜಾಗ್ರತಾ ಕ್ರಮ ಹಿನ್ನೆಲೆ ಪೋಲಿಸರು ಪ್ರತಿಕೃತಿ ದಹನಕ್ಕೆ ಅವಕಾಶ ನಿರಾಕರಿಸಿದರು. ಪೋಲಿಸರ ಮನವಿ ಹಿನ್ಮೆಲೆ ಶಾಂತಿಯುತವಾಗಿ ಪ್ರತಿಭಟನೆ ಮುಕ್ತಾಯವಾಯಿತು.
ಪ್ರತಿಭಟನೆಯಲ್ಲಿ ಶಿಕ್ಷಣ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ನಾರಾಯಣಸ್ವಾಮಿ,ಶಿಕ್ಷಣ ವಿಭಾಗದ ಡೀನರು ಪ್ರೊ.ಪಿ.ಸಿ.ಕೃಷ್ಣಸ್ವಾಮಿ, ಶಿಕ್ಷಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಕೆ.ಶಿವಪ್ಪ, ಈ ಹೋರಾಟದ ನೇತೃತ್ವ ವಹಿಸಿದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸತೀಶ್ ಜಿ.ಕೆ , ಯಲ್ಲಪ್ಪ ಅಜೀವ, ಈಶ್ವರ್ ಸಿರಿಗೇರಿ, ಲಿಂಗರಾಜು ಎಸ್.ಎo, ಅಶೋಕ್ ವಿ, ಸುಗುಣ, ಪ್ರಶಾಂತ ಟಿ.ಎಂ, ಮತೀತರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.