ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ, ಹೋದವರನ್ನು ವಾಪಸ್ ಕರೆಸಿಕೊಳ್ಳುತ್ತಿದೆ ಎನ್ನಲಾಗಿದೆ. ಅದಕ್ಕೆ ತಕ್ಕ ಹಾಗೇ ಬಿಜೆಪಿಯಲ್ಲಿರುವವರು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡುತ್ತಿದ್ದಾರೆ. ಇದೀಗ ಬಿಜೆಪಿ ಕೂಡ ತಮ್ಮವರನ್ನು ವಾಪಾಸ್ ಕರೆಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ. ಈಗ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಲಿಂಗಾಯತರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಜಗದೀಶ್ ಶೆಟ್ಟರ್ ನೇತೃತ್ವವಹಿಸಲಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಕೇಂದ್ರ ಸಚಿವ ಅಮಿತ್ ಶಾ ಕಡೆಯಿಂದ ಜಗದೀಶ್ ಶೆಟ್ಟರ್ ಗೆ ಕಾಲ್ ಬಂದಿದೆ ಎನ್ನಲಾಗ್ತಿದೆ.

ಲೋಕಸಭಾ ಚುನಾವಣೆ ಮುಖ್ಯವಾಗಿರುವ ಹಿನ್ನೆಲೆ ಕೇಂದ್ರ ನಾಯಕರೇ ಮುಂದಾಳತ್ವ ವಹಿಸಿದ್ದಾರೆ ಎನ್ನಲಾಗ್ತಾ ಇದೆ. ಪಕ್ಷ ಬಿಟ್ಟು ಹೋದ ನಾಯಕರ ಮನವೊಲಿಕೆಗೆ ಬಿಜೆಪಿ ಕೇಂದ್ರ ನಾಯಕರೇ ಮುಂದಾಗಿದ್ದಾರೆ. ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಜಗದೀಶ್ ಶೆಟ್ಟರ್ ಮತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಪರೋಕ್ಷವಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಇದೀಗ ಸಚಿವ ಅಮಿತ್ ಶಾ ಶೆಟ್ಟರ್ಗೆ ಕರೆ ಮಾಡಿದ್ದಾರೆ. ನಿನ್ನೆ (ಆ.25) ಸಂಜೆ ಅಮಿತ್ ಶಾ ಕರೆ ಮಾಡಿದ್ದು, ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ, ಜಗದೀಶ್ ಶೆಟ್ಟರ್ಗೆ ಕರೆ ಮಾಡಿ 10 ನಿಮಿಷ ಮಾತನಾಡಿದ್ದಾರೆ ಎನ್ನಲಾಗಿದೆ.

