ಶ್ರೀನಗರ: ಕಳೆದ ಕೆಲವು ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳು ಹಾಗೂ ಸರ್ಕಾರಿ ನೌಕರಿಯಲ್ಲಿರುವವರ ಹತ್ಯೆ ಹೆಚ್ಚಾಗುತ್ತಿದೆ. ಇದರಿಂದ ಆತಂಕಗೊಂಡಿರುವ ನೌಕರರು ನಮ್ಮನ್ನು ಸುರಕ್ಷತೆಯ ಜಾಗಕ್ಕೆ ವರ್ಗಾಹಿಸಿ ಎಂದು ಮನವಿ ಮಾಡಿದ್ದಾರೆ. ಭದ್ರತೆಗೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಇದೀಗ ವೈರಲ್ ಆಗುತ್ತಿರುವ ಫೋಟೋಗಳು ಬೇರೆಯದ್ದೆ ಕಥೆ ಹೇಳುತ್ತಿವೆ. ಅಲ್ಲಿನ ಉಗ್ರರು ಹಿಂದೂಗಳ ದೇವಾಲಯವನ್ನು ಟಾರ್ಗೆಟ್ ಮಾಡುತ್ತಿದ್ದಾರ ಎಂಬ ಅನುಮಾನಗಳನ್ನು ಮೂಡಿಸಿದೆ.
ಕಳೆದ ಒಂದು ತಿಂಗಳಲ್ಲಿ ಒಂಭತ್ತು ಮಂದಿಯನ್ನು ಹತ್ಯೆ ಮಾಡಿದ್ದಾರೆ ಇಲ್ಲಿನ ಉಗ್ರರು. ಈ ಮಧ್ಯೆ ಭಗವಾನ್ ವಾಸುಕಿ ನಾಗ ದೇಗುಲವನ್ನು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಜಮ್ಮುವಿನ ದೋಡಾ ಜಿಲ್ಲೆಯಲ್ಲಿರುವ ಈ ದೇವಸ್ಥಾನ 17,400 ಅಡಿ ಎತ್ತರದ ಕೈಲಾಸ ಕುಂಡ್ ನಲ್ಲಿದೆ. ತನ್ನದೇ ಆದ ಇತಿಹಾಸವನ್ನು ಈ ದೇವಸ್ಥಾನ ಹೊಂದಿದೆ. ಸ್ಥಳೀಯ ಜನ ಈ ದೇವಸ್ಥಾನಕ್ಕೆ ವಿಶೇಷ ಮಹತ್ವ ನೀಡುತ್ತಾರೆ. ಅಂಥದ್ರಲ್ಲಿ ಈ ದೇವಸ್ಥಾನವನ್ನೇ ಕುರೂಪ ಮಾಡಿದ್ದಾರೆ.
ಧ್ವಂಸದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದನ್ನು ಗಮನಿಸಿದ ಭಧೇರ್ವಾಹ್ ನಲ್ಲಿರುವ ಸನಾತನ ಧರ್ಮದ ಸಭಾ ಮುಷ್ಕರಕ್ಕೆ ಕರೆ ನೀಡಿದೆ. ಇಂದು ಕಣಿವೆ ನಾಡಿನ ಹಲವೆಡೆ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಭದೇರ್ವಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ.