ಸುದ್ದಿಒನ್
ದೇಶದ ಬಡ ಜನರಿಗೆ ಅನುಕೂಲವಾಗುವ, ಅವರ ಆರ್ಥಿಕ ಜೀವನ ಮಟ್ಟ ಸುಧಾರಣೆಯಾಗಲು ಮತ್ತು ಮೂಲಭೂತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು (ಪಿಎಂಜೆಡಿವೈ) ಕೇಂದ್ರವು ತಂದ ಯೋಜನೆಯಾಗಿದೆ. 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಆಗಸ್ಟ್ 28, 2014 ರಂದು ಪ್ರಾರಂಭಿಸಲಾಯಿತು.
ಹಿಂದುಳಿದ ವರ್ಗಗಳಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಮಹತ್ತರವಾದ ಮಹತ್ವಾಕಾಂಕ್ಷೆಯೊಂದಿಗೆ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಜನರು ಮತ್ತು ಮಹಿಳೆಯರು ಎಂಬುದು ಗಮನಾರ್ಹ. ಈ ಯೋಜನೆಯಡಿ, ಕುಟುಂಬದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ ಇರುವಂತೆ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.
ಇದೀಗ ಜನ್ ಧನ್ ಯೋಜನೆ ಹೊಸ ಮೈಲಿಗಲ್ಲನ್ನು ತಲುಪಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಖಾತೆಗಳು 50 ಕೋಟಿ ತಲುಪಿವೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಈ ಖಾತೆಗಳು ಬೇರೆ ಬೇರೆ ಬ್ಯಾಂಕ್ ಗಳಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. 9 ವರ್ಷದೊಳಗೆ ಈ ಗುರಿ ತಲುಪಿದೆ. ಈ ಜನ್ ಧನ್ ಯೋಜನೆಯ ಫಲಾನುಭವಿಗಳಲ್ಲಿ ಶೇ. 56 ರಷ್ಟು ಮಹಿಳೆಯರೇ ಆಗಿದ್ದಾರೆ. ಈ ಕುರಿತು ಸಂಪೂರ್ಣ ವಿವರಗಳೊಂದಿಗೆ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಹಣಕಾಸು ಇಲಾಖೆಯ ಪ್ರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೇ.67 ರಷ್ಟು ಜನ್ ಧನ್ ಖಾತೆಗಳಿವೆ. ಈ ಎಲ್ಲಾ ಖಾತೆಗಳಲ್ಲಿ ಇದುವರೆಗೆ ಒಟ್ಟು ರೂ.2.03 ಲಕ್ಷ ಕೋಟಿ ನಗದು ಜಮೆಯಾಗಿದೆ. ಈ ಯೋಜನೆಯನ್ನು ಬಳಸಿಕೊಂಡ ಖಾತೆದಾರರಿಗೆ 34 ಕೋಟಿ ರೂಪೇ ಕಾರ್ಡ್ಗಳನ್ನು ನೀಡಲಾಗಿದೆ. ಇದಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ. ಒಂದು ಖಾತೆಯಲ್ಲಿ ಸರಾಸರಿ ರೂ. 4076 ನಗದು ಇದೆ ಎಂದು ತಿಳಿಸಿದೆ.
2014 ರವರೆಗಿನ ದೇಶದಲ್ಲಿ ಶೇಕಡಾ 50 ರಷ್ಟು ಜನರೂ ಸಹ ಬ್ಯಾಂಕ್ ಖಾತೆಯನ್ನು ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಬ್ಯಾಂಕ್ ಖಾತೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆಗಸ್ಟ್ 15, 2014 ರಂದು ಘೋಷಿಸಲಾಯಿತು. ಮತ್ತು ಆಗಸ್ಟ್ 28 ರಂದು ಪ್ರಾರಂಭಿಸಲಾಯಿತು. ಮೊದಲ ವರ್ಷದಲ್ಲಿಯೇ 17.90 ಕೋಟಿ ಜನರು ಖಾತೆ ತೆರೆದಿದ್ದಾರೆ. ಈ ಜನ್ ಧನ್ ಖಾತೆಯಲ್ಲಿ ಕನಿಷ್ಠ ನಗದು ಬ್ಯಾಲೆನ್ಸ್ (ಮಿನಿಮಮ್ ಬ್ಯಾಲೆನ್ಸ್) ಇರಬೇಕಾದ ಅಗತ್ಯವಿಲ್ಲ. ರುಪೇ ಕಾರ್ಡ್ಗಳನ್ನು ಯಾವುದೇ ಶುಲ್ಕವಿಲ್ಲದೆ ನೀಡಲಾಗುತ್ತದೆ. ರೂ. 10,000 ವರೆಗೆ ಓವರ್ಡ್ರಾಫ್ಟ್ ಸೌಲಭ್ಯವಿದೆ. ಅಂದರೆ ಖಾತೆಯಲ್ಲಿ ನಗದು ಇಲ್ಲದಿದ್ದರೂ ರೂ. 10 ಸಾವಿರದವರೆಗೆ ತೆಗೆದುಕೊಳ್ಳಬಹುದು.
ಶೂನ್ಯ ಬ್ಯಾಲೆನ್ಸ್ ಇದ್ದರೂ ರೂ. 2 ಲಕ್ಷದವರೆಗಿನ ಅಪಘಾತ ವಿಮಾ ರಕ್ಷಣೆ ಅನ್ವಯಿಸುತ್ತದೆ. ಈ ಪಿಎಂ ಜನ್ ಧನ್ ಖಾತೆಗಳನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದಾಗಿದೆ.