ಚಿತ್ರದುರ್ಗ, (ಏ.15) : ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ತಾಲೂಕಿನ ಸೀಬಾರ ಬಳಿ ಮತಪ್ರಚಾರ ಸಭೆಯಲ್ಲಿ ಮಾತನಾಡಿ, ಆಂಜನೇಯ ಅವರಿಗೆ ಎಂಎಲ್ಸಿ ಮಾಡಿಕೊಂಡು ಮಂತ್ರಿ ಮಾಡುತ್ತೇವೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಜ್ಯ ಸುತ್ತಾಡಿ ಎಂದು ಎಐಸಿಸಿ ಸೂಚನೆ ಕೊಟ್ಟಿತ್ತು. ಆದರೆ, ಹೊಳಲ್ಕೆರೆ ಕ್ಷೇತ್ರದ ಜನರ, ಮುಖಂಡರ ಒತ್ತಾಯಕ್ಕೆ ಮಣಿದು ಈ ಎಲ್ಲ ಹುದ್ದೆಗಳನ್ನು ತ್ಯಾಗ ಮಾಡಿದ್ದಾರೆ. ಆಂಜನೇಯ ರಾಜ್ಯ ನಾಯಕರು. ಅವರ ಗೆಲುವು ಪಕ್ಷ ಮತ್ತು ರಾಜ್ಯಕ್ಕೆ ಅಗತ್ಯವಾಗಿದೆ ಎಂದರು.
ಆಂಜನೇಯ ಅವರಿಗೆ ಚುನಾವಣೆ ಅಗತ್ಯವಿರಲಿಲ್ಲ. ನಿಮ್ಮೆಲ್ಲರ ಹಕ್ಕೊತ್ತಾಯಕ್ಕೆ ಮಣಿದು ಸ್ಪರ್ಧಿಸಿದ್ದಾರೆ. ಆದ್ದರಿಂದ ಈ ಬಾರಿ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕಿದ್ದು, ಚುನಾವಣೆಗೆ ನಿಲ್ಲಿಸಿದ ನಿಮ್ಮಗಳ ಜವಾಬ್ದಾರಿ ಹೆಚ್ಚು ಇದೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನನಗೆ ರಾಜಕೀಯ ಸ್ಥಾನಮಾನ ದೊರೆಯಲು ಮುಖ್ಯ ಕಾರ್ಯಕರ್ತರು, ಹೊಳಲ್ಕೆರೆ, ಭರಮಸಾಗರ ಕ್ಷೇತ್ರದ ಜನರು.ಕಳೆದ ವಾರ ಮಾಜಿ ಶಾಸಕ ಪಿ.ರಮೇಶ್ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದಿದ್ದು, ಅಂದು ಅವರ ಪುತ್ರ, ಜಿಪಂ ಮಾಜಿ ಸದಸ್ಯ ಆರ್.ಶಿವಕುಮಾರ್ ಇರಲಿಲ್ಲ. ಆದರೆ, ಇಂದು ಸಾವಿರಾರು ಬೆಂಬಲಿಗರ ಜೊತೆಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ. ಅವರಿಂದ ಪಕ್ಷಕ್ಕೆ ಆನೆಬಲ ಬಂದಂತೆ ಆಗಿದೆ ಎಂದು ಹೇಳಿದರು.
ಚುನಾವಣೆ ಪ್ರಚಾರ ಆರಂಭಿಸಿದಾಗ ನನ್ನ ನಿರೀಕ್ಷೆಗೂ ಮೀರಿ ಸಾಧು ಲಿಂಗಾಯತರು, ವೀರಶೈವರು, ಯಾದವರು, ಕಾಡುಗೊಲ್ಲರು, ನೊಣಬರು, ಕುಂಚಿಟಿಗರು, ನಾಯಕ ಸಮುದಾಯದವರು, ಮಡಿವಾಳ, ಮುಸ್ಲಿಂ, ಸವಿತಾ ಸಮಾಜ, ಲಂಬಾಣಿ, ಬೋವಿ ಸಮುದಾಯ, ಕುರುಬರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಊರುಗಳಿಗೆ ನಾನು ಮತಪ್ರಚಾರಕ್ಕೆ ಬರುವ ಸುದ್ದಿ ತಿಳಿದು ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವಿನ ಮಳೆಯನ್ನೇ ಸುರಿಸಿ ಸ್ವಾಗತಿಸುತ್ತಿದ್ದಾರೆ. ನಿಜಕ್ಕೂ ನನಗೆ ನಿಮ್ಮ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದರು.
ನಾನು ಸಚಿವನಾದ ಸಮಯದಲ್ಲಿ ಕುಂಚಿಟಿಗ ಸಮಯದಾಯಕ್ಕೆ 2 ಎ ಮೀಸಲಾತಿ ನೀಡುವ ವಿಚಾರಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಲು ವಿಶೇಷ ಸ್ಥಾನಮಾನ ದೊರಕಲು ಶ್ರಮಿಸಿದ್ದೇನೆ.
ಕಾಡುಗೊಲ್ಲರಿಗೆ ನಾಗರಿಕ ಸೌಲಭ್ಯ ಕಲ್ಪಿಸಲು ಅವರನ್ನು ಅರೆ ಅಲೆಮಾರಿ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶ್ರಮಿಸಿದ್ದೇನೆ. ಇನ್ನೂ ಹೆಚ್ಚು ಕೆಲಸ ಮಾಡಲು ಜನರ ಆಶೀರ್ವಾದ ಮಾಡಿ ಎಂದು ತಿಳಿಸಿದರು.
ಎಂ.ಚಂದ್ರಪ್ಪ 300 ಕೆರೆ ನಿರ್ಮಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಜನರೇ ಅವರನ್ನು ಲೆಕ್ಕ ಕೊಡಪ್ಪ ಎಂದು ಕೇಳಬೇಕು. ರಸ್ತೆ ನಿರ್ಮಾಣ ಹಾಗೂ ಡಿಎಂಎಫ್ ನ 60 ಕೋಟಿ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಕ್ಷೇತ್ರದ ಬಹುತೇಕ ಕಾರ್ಯಕ್ರಮಗಳು ನನ್ನ ಅನುದಾನದಲ್ಲಿ ಆಗಿದ್ದು, ಈಗಿನ ಶಾಸಕರು ಅವುಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಜೀವನದ ಆರಂಭದಿಂದಲೂ ಹೋರಾಟದ ಮೂಲಕ ಎತ್ತರಕ್ಕೆ ಬೆಳೆದಿರುವ ಆಂಜನೇಯ, ಈ ಬಾರಿ ಜನರಿಗಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅವರ ಗೆಲುವು ರಾಜ್ಯದಲ್ಲಿಯೇ ದಾಖಲು ಆಗುವ ರೀತಿ ಹೆಚ್ಚು ಮತಗಳು ಲಭಿಸಬೇಕು. ಈ ಮೂಲಕ ಬಿಜೆಪಿ ದುರಾಡಳಿತ ಅಂತ್ಯಗೊಳಿಸಲು ಹೊಳಲ್ಕೆರೆ ಕ್ಷೇತ್ರದ ಜನರೇ ಮುನ್ನುಡಿ ಬರೆಯಬೇಕು ಎಂದು ಕೋರಿದರು.
ಶಾಸಕ ಎಂ.ಚಂದ್ರಪ್ಪ ಅವರ ಅಹಂಕಾರ ಮಿತಿ ಮೀರಿದೆ. ಅನೇಕ ಹಳ್ಳಿಗಳಲ್ಲಿ ಅವರನ್ನು ಸೋಲಿಸಿ, ಆಂಜನೇಯ ಅವರನ್ನು ಗೆಲ್ಲಿಸಿ ಎಂಬ ಘೋಷಣೆ ಜೋರಾಗಿದೆ. ಇದೇ ಕಾರಣಕ್ಕೆ ಆಂಜನೇಯ ಬರ್ತಾರೆ ಅಂದ್ರೆ ಹಳ್ಳಿಗಳಲ್ಲಿ ಜನಸಾಗರವೇ ಸೇರುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಮಾತನಾಡಿ, ಎಚ್. ಆಂಜನೇಯ ಅವರು ಕರ್ನಾಟಕದ ಎಲ್ಲ ವರ್ಗದ ನಾಯಕರು. ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಶಕ್ತಿ ತುಂಬಲು ಮಾಜಿ ಶಾಸಕ ಪಿ.ರಮೇಶ್ ಅವರ ಪುತ್ರ ಶಿವಕುಮಾರ್ ಅವರು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ತೊರೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದರು.
ಜೈಲಿನಿಂದ ಬಿಡುಗಡೆ ಆಗಿದೆ
ಶಾಸಕ ಚಂದ್ರಪ್ಪ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅವರಿರುವ ಪಕ್ಷದಲ್ಲಿ ನಮಗೆ ಜೈಲಿನಿದ್ದ ರೀತಿ ಅನುಭವ ಆಗುತ್ತಿತ್ತು. ಈಗ ಪಂಜರದಿಂದ ಹೊರಗಡೆ ಬಂದು ಸ್ವತಂತ್ರವಾಗಿದ್ದೇನೆ ಎಂದು ಮಾಜಿ ಶಾಸಕ ಪಿ.ರಮೇಶ್ ಪುತ್ರ, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್ ಹೇಳಿದರು.
ಮೆ.13 ರ ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ. ನನ್ನ ಶಕ್ತಿ ಏನೆಂಬುದನ್ನು ಫಲಿತಾಂಶದ ಮುಖೇನ ತೋರಿಸುವೆ. ಇಷ್ಟು ದಿನ ಜೈಲಿನಲ್ಲಿ ಇದ್ದ ಆಗಿತ್ತು. ಇದೀಗ ಹೊರಗಡೆ ಬಂದಿದ್ದೇವೆ ಎನ್ನವಂತಾಗಿದೆ. ನಮ್ಮ ಸಾವಿರಾರು ಮುಖಂಡರು, ಕಾರ್ಯಕರ್ತರು ನಿಸ್ವಾರ್ಥವಾಗಿ ಆಂಜನೇಯ ಅವರ ಗೆಲುವಿಗೆ ಶ್ರಮಿಸುತ್ತೇವೆ. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪಕ್ಷ, ಜಾತಿ, ಧರ್ಮ ನೋಡದೇ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಗೆದ್ದರೆ ಹೊಳಲ್ಕೆರೆಯೇ ಗೆದ್ದಂತೆ ಎಂದು ಹೇಳಿದರು.
ಆದ್ದರಿಂದ ಚುನಾವಣೆ ಮುಗಿಯುವವರೆಗೂ ಮನೆಗೆ ಸೇರದೇ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ನಾನು ಮತ್ತು ನೂರಾರು ಮುಖಂಡರು ಸುತ್ತಾಡಿ, ಆಂಜನೇಯ ಪರ ಮತಯಾಚಿಸುತ್ತೇವೆ ಎಂದರು.
ಹೊಳಲ್ಕೆರೆ ಮಾಜಿ ಶಾಸಕ ಶಿವಪುರ ರಮೇಶರವರ ಪುತ್ರ ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಂಡಿಗೇನಹಳ್ಳಿ ಜಗದೀಶ್ ಸೇರಿದಂತೆ ನೂರಾರು ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕೆಪಿಸಿಸಿ ಕಾರ್ಯಧ್ಯಕ್ಷ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾಜಿ ಸಚಿವ ಎಚ್.ಆಂಜನೇಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ಜಿಪಂ ಮಾಜಿ ಸದಸ್ಯರಾದ ರಂಗಸ್ವಾಮಿ, ನರಸಿಂಹರಾಜು, ಬಿ.ಪಿ.ಪ್ರಕಾಶ್‍ಮೂರ್ತಿ, ಸಿರಿಗೆರೆ ಗ್ರಾಪಂ ಅಧ್ಯಕ್ಷ ದೇವರಾಜ್, ಕೋಗುಂಡೆ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಒಬಿಸಿ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್, ಎವೈಸಿ ಕೋ ಆರ್ಡಿನೇಟರ್ ಅರ್ಬಬ್ ಖಾನ್, ಮುಖಂಡರಾದ ಪುರುಷೋತ್ತಮ್, ಲಿಂಗವ್ವನಾಗ್ತಿಹಳ್ಳೀ ತಿಪ್ಪೇಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು.