ಚಿತ್ರದುರ್ಗ. ಮಾ.16 : ಚಿತ್ರದುರ್ಗ ಲೋಕಸಭಾ ಚುನಾವಣೆ ವೇಳಾಪಟ್ಟಿ ಬಿಡುಗಡೆಯಾಗಿದೆ. ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಯಾವುದೇ ದೂರುಗಳಿಗೆ ಅವಕಾಶ ಬರದಂತೆ ಅಧಿಕಾರಿಗಳು ಚುನಾವಣೆ ಕಾರ್ಯ ನಿರ್ವಹಿಸುವಂತೆ ಲೋಕಸಭಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಈ ಕುರಿತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ನೀತಿ ಸಂಹಿತೆ ಹಿನ್ನಲೆಯಲ್ಲಿ ತಕ್ಷಣದಿಂದಲೇ ಜಿಲ್ಲಾ ಪಂಚಾಯಿತಿ ಸಿಇಓ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳು, ಸರ್ಕಾರಿ, ವಿವಿಧ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಅನಧಿಕೃತ ಗೋಡೆ ಬರಹ, ಬಿತ್ತಿ ಚಿತ್ರಗಳು, ಬ್ಯಾನರ್ ಹಾಗೂ ಬಂಟಿಗ್ ಸೇರಿದಂತೆ ಹೋರ್ಡಿಂಗ್‍ಗಳನ್ನು ತೆರವುಗೊಳಿಸಬೇಕು.
ಈ ಕುರಿತು ಚುನಾವಣೆ ಆಯೋಗಕ್ಕೆ ಸೂಕ್ತ ನಮೂನೆಯಲ್ಲಿ ಸಕಾಲದಲ್ಲಿ ಮಾಹಿತಿ ಒದಗಿಸಬೇಕು. ಅಂತರಾಜ್ಯ ಗಡಿಯ ಚೆಕ್‍ಪೋಸ್ಟ್‍ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿನ ಹಾಗೂ ವಿವಿಧ ಕಡೆ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಮಾರ್ಚ್ 17 ರಿಂದಲೇ ಕಾರ್ಯಾರಂಭ ಮಾಡಬೇಕು.
ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರು ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಬೇಕು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಪ್ರಚಾರಕ್ಕಾಗಿ ಸುವಿಧಾ ತಂತ್ರಾಂಶದಲ್ಲಿಯೇ ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ರಾಜಕೀಯ ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡಿ. ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಸುಪರ್ದಿಗೆ ಪಡೆಯಬೇಕು. ಈ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. 85 ವರ್ಷ ದಾಟಿದವರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವಂತಾಗಲು ಅರ್ಹರಿಗೆ 12ಡಿ ಫಾರಂ ವಿತರಿಸಬೇಕು.
ಮನೆಯಿಂದಲೇ ಮತದಾನಕ್ಕೆ ಇಚ್ಚಿಸುವವರ ಪಟ್ಟಿ ಸಿದ್ದಪಡಿಸಿಕೊಳ್ಳಬೇಕು. ವಿಧಾನ ಸಭಾ ಕ್ಷೇತ್ರವಾರು ಕಂಟ್ರೋಲ್ ರೂಮ್‍ಗಳನ್ನು ಸ್ಥಾಪಿಸಿ, ಕುಂದು ಕೊರತೆ, ಸಮಸ್ಯೆ ಹಾಗೂ ದೂರಗಳಿಗೆ ಸ್ಪಂದಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಸಿಬ್ಬಂದಿ ಚುನಾವಣೆ ಕಾರ್ಯ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಸಹರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಘಂನೆಯಾಗದಂತೆ ನಿಗಾವಹಿಸಬೇಕು. ಧಾರ್ಮಿಕ ಹಾಗೂ ಮದುವೆ ಮುಂಜಿ ಸೇರಿದಂತೆ ಖಾಸಗಿ ಕಾರ್ಯಗಳಿಗೆ ಅನುಮತಿ ಅಗತ್ಯವಿಲ್ಲ. ಆದರೆ ಈ ಸ್ಥಳಗಳನ್ನು ರಾಜಕೀಯ ಚಟುವಟಿಕೆಗಾಗಿ ಬಳಸಲು ಅವಕಾಶವಿಲ್ಲ. ಹೀಗಾಗಿ ಇಂತಹ ಸ್ಥಳಗಳಲ್ಲಿ ರಾಜಕೀಯ ವ್ಯಕ್ತಿಗಳು ಚುನಾವಣೆ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಬೇಕು. ಸಿ-ವಿಜಿಲ್ ತಂತ್ರಾಂಶದ ಮೂಲಕ ಬರುವ ದೂರಗಳ ಬಗ್ಗೆ ತಕ್ಷಣೆ ಸ್ಪಂದನೆ ನೀಡಬೇಕು.
ಚುನಾವಣೆ ಕಾರ್ಯದ ನೆಪ ಹೇಳಿ, ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾವುದೇ ಹೊಸ ಕಾಮಗಾರಿಗಳ ಉದ್ಘಾಟನೆ, ನಿರ್ಮಾಣ, ಶಂಕುಸ್ಥಾಪನೆಗಳಿಗೆ ಅವಕಾಶವಿಲ್ಲ. ಹೊಸ ಟೆಂಡರ್ ಕರೆಯಲು ಅವಕಾಶವಿಲ್ಲ. ಈಗಾಗಲೇ ಚಾಲ್ತಿಯಲ್ಲಿ ಇರುವ ಟೆಂಡರ್‍ಗಳ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಇರಿಸಿಕೊಳ್ಳಬೇಕು, ಆದರೆ ಕಾರ್ಯಾದೇಶ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಪ್ರತಿದಿನ ಅಧಿಕಾರಿಗಳು ಚುನಾವಣೆ ಅಕ್ರಮಗಳ ಸಂಬಂಧ ವಶಪಡಿಸಿಕೊಂಡ ವಸ್ತು, ಹಣ, ಮಧ್ಯ ಹಾಗೂ ಪ್ರಚಾರ ಸಾಮಗ್ರಿಗಳ ಮಾಹಿತಿಯನ್ನು ಕೂಡಲೇ ನೀಡಬೇಕು. ಇವುಗಳನ್ನು ಒಟ್ಟುಗೂಡಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಲಾಗುವುದು. ಈಗಾಗಲೇ ಸ್ಥಾನಿಕ, ವಿಚಕ್ಷಣ, ವಿಡಿಯೋ ಹಾಗೂ ಸಂಚಾರಿ ಕಣ್ಗಾವಲು ತಂಡಗಳಿಗೆ ಅಧಿಕಾರಿಗಳನ್ನು ನೇಮಿಸಿಲಾಗಿದೆ ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಚೆಕ್ ಪೋಸ್ಟ್ ಹಾಗೂ ಸಂಚಾರಿ ಕಣ್ಗಾವಲು ತಂಡಗಳಿಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಅಕ್ರಮ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಗಾಗಲೇ 596 ಸಮಾಜ ವಿದ್ರೋಹಿಗಳು, ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಪ್ರಕರಣಗಳಲ್ಲಿಯೂ ತಹಶೀಲ್ದಾರ್ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು. 20 ಜನರನ್ನು ಗಡಿಪಾರು ಮಾಡುವ ಸಂಬಂಧದ ಶಿಫಾರಸ್ಸನ್ನು ಚಿತ್ರದುರ್ಗ ವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಶೀಘ್ರವೇ ಅವರು ಈ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವರು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಹಾಗೂ ಎಂ.ಸಿ.ಸಿ ನೋಡಲ್ ಅಧಿಕಾರಿಗಳಾದ ಎಸ್.ಜೆ.ಸೋಮಶೇಖರ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.