ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಡಿ.17): ಹೊಳಲ್ಕೆರೆ ತಾಲ್ಲೂಕಿನ ಹತ್ತೊಂಬತ್ತು ಗ್ರಾಮಗಳಲ್ಲಿ ಬಗರ್‍ಹುಕುಂ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸೂಚಿಸಿದರು.
ಹೊಳಲ್ಕೆರೆ ಪ್ರವಾಸಿ ಮಂದಿರದಲ್ಲಿ ಶನಿವಾರ ಬಗರ್‍ಹುಕುಂ ಅಕ್ರಮ ಸಾಗುವಳಿ ಸಕ್ರಮಿಕರಣ ಸಮಿತಿ ಸಭೆ ನಡೆಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ 19 ಗ್ರಾಮಗಳಲ್ಲಿ 478 ಫಲಾನುಭವಿಗಳಿಗೆ 860 ಎಕರೆ ಜಮೀನು ಹಂಚಿಕೆ ಮಾಡಲಾಗುವುದು.
ಇನ್ನು ಬಹಳಷ್ಟು ರೆಕಾರ್ಡ್ ಆಗಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಅನೇಕ ಹಳ್ಳಿಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು. ಸರಿಯಾಗಿ ಕೆಲಸ ಮಾಡದ ನಾಲ್ವರು ಕಂದಾಯ ನಿರೀಕ್ಷಕರುಗಳನ್ನು ರಜೆ ಮೇಲೆ ಕಳಿಸಿ, ಸೇವೆಯಿಂದ ಅಮಾನತ್ತುಗೊಳಿಸಿ ಇಲ್ಲವೇ ವರ್ಗಾವಣೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಪ್ರಾಮಾಣಿಕವಾಗಿ ಕೆಲಸ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಚಾರ್ಜ್ ಕೊಟ್ಟು ಹೋಗಲಿ ಎಂದು ಸೋಮಾರಿ ಸಿಬ್ಬಂದಿಗಳ ವಿರುದ್ದ ಅಸಮಾಧಾನಗೊಂಡರು.
ಜಾನುವಾರುಗಳ ಮೇವಿಗೆ ಅನುಗುಣವಾಗಿ ಜಮೀನು ಕಾಯ್ದಿರಿಸಿಕೊಂಡು ಉಳಿದ ಭೂಮಿಯನ್ನು ರೈತರಿಗೆ ಹಂಚಿಕೆ ಮಾಡುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಹೇಳಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಅನೇಕ ರೈತರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಆದರೆ ಲಿಮಿಟೆಷನ್ ಮುಗಿದ ಮೇಲೆ ಕೆಲವರು ಮಾರಾಟ ಮಾಡಿಕೊಂಡು ಅಕ್ರಮ ಸಕ್ರಮ ಯೋಜನೆಯಡಿ ಮತ್ತೆ ಜಮೀನಿಗಾಗಿ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಎಲ್ಲಿ ಜಮೀನು ಲಭ್ಯವಿದೆಯೋ ಅಲ್ಲಿ ಎಲ್ಲಾ ರೈತರಿಗೂ ಭೂಮಿ ನೀಡುವುದಾಗಿ ಶಾಸಕ ಎಂ.ಚಂದ್ರಪ್ಪ ಭರವಸೆ ಕೊಟ್ಟರು.
ಹೊಳಲ್ಕೆರೆ ತಹಶೀಲ್ದಾರ್ ಶ್ರೀಮತಿ ರೇಖ ಟಿ. ಶ್ರೀಮತಿ ಹಾಲಮ್ಮ, ದಗ್ಗೆಶಿವಪ್ರಕಾಶ್, ಕೃಷ್ಣಮೂರ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.