ಚಿತ್ರದುರ್ಗ,(ಮೇ.24) : ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನೀಸಾ ಹಾಗೂ ತಳಕು ಹೋಬಳಿ ಕಾಲುವೇಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಸಿರಾಜ್ ಉಲ್ ಹುಸೇನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನೀಸಾ ಜಾಜೂರು ಕಂದಾಯ ವೃತ್ತದ ಬೆಳೆ ಪರಿಹಾರದ ಲಾಗಿನ್ ಐ.ಡಿ ಹೊಂದಿದ್ದು, ಇದರಲ್ಲಿ ಜಾಜೂರು ಮಜರೆ ಕಾಮಸಮುದ್ರ ಗ್ರಾಮದ ವಾಸಿಯಾದ ಸಂಜೀವಮೂರ್ತಿ ಬಿನ್ ಮಲ್ಲೇಶಪ್ಪ ಇವರು ಈ ಹಿಂದೆ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಿ.ಆರ್.ಆಗಿ ಕಾರ್ಯನಿರ್ವಹಿಸಿದ್ದು, ಇವರದೇ ಮೊಬೈಲ್‍ನಲ್ಲಿ ಅಪ್‍ಲೋಡ್ ಮಾಡಿರುವುದಾಗಿ ಗ್ರಾಮ ಸಹಾಯಕರ ಮಗ ತಿಳಿಸಿರುತ್ತಾರೆ.
ಪ್ರಾಥಮಿಕ ವರದಿಯಂತೆ ಬೆಳೆ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ನಮೂದಿಸದೇ, 37 ಜನ ಬೇರೆ ವ್ಯಕ್ತಿಗಳಿಗೆ, ಸ್ವಂತ ಸಂಬಂಧಿಗಳಿಗೆ ಉದ್ದೇಶಪೂರ್ವಕವಾಗಿ ಪರಿಹಾರದ ಹಣವನ್ನು ನಮೂದು ಮಾಡಿರುವುದು ತಿಳಿದುಬಂದಿದ್ದು, 2020-21, 2021-22 ಮತ್ತು 2022-23ನೇ ಸಾಲಿನಲ್ಲಿ ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಕಾಲುವೆಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಸಿರಾಜ್ ಉಲ್ ಹುಸೇನ್ ಅವರು ತಳಕು ಹೋಬಳಿ ಕಾಲುವೇಹಳ್ಳಿ ಕಂದಾಯ ವೃತ್ತದ ಬೆಳೆ ಪರಿಹಾರದ ಲಾಗಿನ್ ಐ.ಡಿ ಹೊಂದಿದ್ದು, ಇದರಲ್ಲಿ ಉಳ್ಳಾರ್ತಿ ಕಾವಲ್ ಹಾಗೂ ಕಾಲುವೇಹಳ್ಳಿ ವ್ಯಾಪ್ತಿಯಲ್ಲಿನ ರೈತರುಗಳಿಗೆ 2022-23ನೇ ಸಾಲಿನಲ್ಲಿ ನೆರೆ ಪರಿಹಾರದ ರೂಪದಲ್ಲಿ ರೈತರಿಗೆ ಸಂದಾಯವಾಗಬೇಕಿದ್ದ ಪರಿಹಾರ ಹಣವು ಹಿರಿಯೂರು ತಾಲ್ಲೂಕಿನ ಗನ್ನನಾಯಕನಹಳ್ಳಿ ಗ್ರಾಮದ ಹಲವಾರು ರೈತರು ಹಾಗೂ ರೈತರಲ್ಲದವರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, ಉದ್ದೇಶಪೂರ್ವಕವಾಗಿ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ನಮೂದಿಸದೇ ಬೇರೆ ವ್ಯಕ್ತಿಗಳಿಗೆ ಪರಿಹಾರದ ಹಣವನ್ನು ನಮೂದು ಮಾಡಿರುವುದು ತಿಳಿದುಬಂದಿದ್ದು, ರೈತರಿಗೆ ಸೇರಬೇಕಾದ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ನಿಯಮಾನುಸಾರ ಬೆಳೆ ಪರಿಹಾರದ ಹಣವನ್ನು ಆರ್.ಟಿ.ಸಿ ದಾಖಲೆಯನ್ವಯ ನೈಜ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕಿರುತ್ತದೆ. ಒಂದು ವೇಳೆ ಆರ್.ಟಿ.ಸಿ ದಾಖಲೆಗೂ ಜಮಾ ಮಾಡಲು ನಮೂದಿಸಿರುವ ಖಾತೆ ಸಂಖ್ಯೆಯ ವಾರಸುದಾರರಿಗೂ ವ್ಯತ್ಯಾಸವಿದ್ದಲ್ಲಿ ಅದನ್ನು ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿಗೆ ನಮೂದಿಸಬೇಕಿರುತ್ತದೆ.
ಆದರೆ ಆರೋಪಿಗಳು ಯಾವುದನ್ನೂ ಪರಿಶೀಲಿಸದೇ, ಉದ್ದೇಶಪೂರ್ವಕವಾಗಿ ಪರಿಹಾರದ ಮೊತ್ತವನ್ನು ಅರ್ಹ ಫಲಾನುಭವಿಗಳ ಹೆಸರಿಗೆ ನಮೂದಿಸದೇ ಬೇರೆ ವ್ಯಕ್ತಿಗಳ ಹೆಸರಿಗೆ ಪರಿಹಾರದ ಹಣವನ್ನು ನಮೂದು ಮಾಡಿ, ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಕರ್ತವ್ಯ ಲೋಪವೆಸಗಿರುವ ನೌಕರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಶಿಸ್ತು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು.
ಆರೋಪಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ನೌಕರರು ಸಲ್ಲಿಸಲಾಗಿರುವ ಲಿಖಿತ ಸಮಜಾಯಷಿಯಲ್ಲಿ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ.
ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳೆ ಪರಿಹಾರ ಮೊತ್ತ ಪಾವತಿ ಕುರಿತು ಫಲಾನುಭವಿಗಳ ವಿವರ ಪರಿಶೀಲಿಸಿ, ಕ್ರಮ ವಹಿಸಬೇಕಿದ್ದ ಚಳ್ಳಕೆರೆಯ ಆಗಿನ ತಹಶೀಲ್ದಾರ್ ಆಗಿದ್ದ ರಘುಮೂರ್ತಿ, ಕಂಪ್ಯೂಟರ್ ಆಪರೇಟರ್‍ಗಳು, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಒಟ್ಟು 06 ಜನರ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಒಟ್ಟು 20.49 ಲಕ್ಷ ರೂ. ಹಣ ದುರ್ಬಳಕೆಯ ಹಾಗೂ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಎಫ್‍ಐಆರ್ ದಾಖಲಾಗಿರುತ್ತದೆ.
ಗ್ರಾಮ ಆಡಳಿತ ಅಧಿಕಾರಿಗಳ ವರ್ತನೆಯು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ತಿದ್ದುಪಡಿ ನಿಯಮಗಳು 2021ರ ನಿಯಮ 3(i) (ii) (iii) ಕ್ಕೆ ವಿರುದ್ಧವಾಗಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನೌಕರರು ಅಮಾನತುಗೊಂಡ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಹಾಗೂ ಕರ್ನಾಟಕ ಸಿವಿಲ್ ಸೇವಾ ನಿಯಮಗಳನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.