ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 13 : ಗೃಹ ರಕ್ಷಕದಳ ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆ ವರದಕ್ಷಿಣೆಯಲ್ಲಿ ಕಿರುಕುಳ ಹಾಗೂ ಸಂಸ್ಥೆಯಲ್ಲಿ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಬಗ್ಗೆ ಚಿತ್ರದುರ್ಗ ನಗರ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರನ್ನು ಕೂಡಲೇ ಬಂಧಿಸಿ ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಎಂ.ಎಸ್. ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಕೆ. ಮಹಾಲಿಂಗಪ್ಪ ಕುಂಚಿಗನಾಳ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ಗೃಹರಕ್ಷಕದಳ ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಹಾಗೂ ಕುಟುಂಬದ ಕೆಲ ಸದಸ್ಯರು ಸೆಪ್ಟೆಂಬರ್ 09ರಂದು ಮಾದಿಗ ಸಮುದಾಯದ ಮಲ್ಲಣ್ಣ ಸ್ಥಾಪಿತ ಮೈಲಾರಲಿಂಗೇಶ್ವರ ನರ್ಸಿಂಗ್ ಕಾಲೇಜಿಗೆ ಅನಧಿಕೃತವಾಗಿ ನುಗ್ಗಿ, ಸಂಸ್ಥೆಯ ಕಾರ್ಯದರ್ಶಿ ಸೇರಿ ಇತರರಿಗೆ ಜೀವ ಬೆದರಿಕೆ ಹಾಕಿ, ಜೊತೆಗೆ ಶಾಲಾ ಕೊಠಡಿಗೆ ನುಗ್ಗಿ ಬೋಧನೆಗೆ ಅಡ್ಡಿಪಡಿಸಿ, ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಿಸಿ, ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದಾರೆ.
ಈ ವೇಳೆ ಸಂಸ್ಥೆಯವರು ಪ್ರಶ್ನಿಸಲು ಹೋದ ಸಂದರ್ಭ ನಾನು ಗೃಹರಕ್ಷಕದಳ ಕಮಾಂಡೆಂಟ್ ಆಗಿದ್ದು, ನಾನು ಎಸ್ಪಿಗೆ ಫೋನ್ ಮಾಡಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ. ನಾನು ಒಂದು ರೀತಿ ಜಿಲ್ಲೆಯಲ್ಲಿ ಎಸ್.ಪಿ ಇದ್ದಂತೆ. ನಾನು ಮನಸ್ಸು ಮಾಡಿದರೇ ನಿಮ್ಮನ್ನು ಏನ್ ಬೇಕಾದ್ರೂ ಮಾಡುವೆ ಎಂದು ದೌರ್ಜನ್ಯದಿಂದ ಹೇಳಿದ್ದಾರೆ. ಜೊತೆಗೆ ಗೃಹರಕ್ಷಕ ಸಿಬ್ಬಂದಿಯನ್ನು ಕಾಲೇಜ್ ಬಳಿಗೆ ಕರೆತಂದು ಗಲಾಟೆ ಮಾಡಿಸಿ, ಸರ್ಕಾರದ ಜೀಪ್ ನಲ್ಲಿ ಈ ರೀತಿ ಆಗಮಿಸಿ ಅನಗತ್ಯವಾಗಿ ಮಾದಿಗ ಸಮುದಾಯದ ಶಿಕ್ಷಣ ಸಂಸ್ಥೆ ವಿರುದ್ಧ ಷಡ್ಯಂತ್ರ ನಡೆಸುವಷ್ಠೇ ಅಲ್ಲದೆ ಸಿಬ್ಬಂದಿ, ಬೋಧಕರು, ಸಂಸ್ಥೆಯ ಕಾರ್ಯದರ್ಶಿ ಇತರರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಈಗಾಗಲೇ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ FIR ದಾಖಲಾಗಿದ್ದು, ಹಾಗೂ ಸಂಸ್ಥೆಯಲ್ಲಿ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಬಗ್ಗೆ ಚಿತ್ರದುರ್ಗ ನಗರ ಬಡಾವಣೆ ಠಾಣೆಯಲ್ಲಿ ಸಂಧ್ಯಾ ಇತರರ ಮೇಲೆ FIR ದಾಖಲಾಗಿದೆ. ಆದರೆ, ತಾನು ಎಸ್.ಪಿ ಇದ್ದಂಗೆ ನನ್ನನ್ನು ಯಾವ ಪೊಲೀಸರು ಬಂಧಿಸಲು ಸಾಧ್ಯ ಇಲ್ಲ ಎಂದು ಹೇಳಿ, ಮತ್ತೇ ಸಂಸ್ಥೆ ಬಳಿ ಸರ್ಕಾರಿ ಜೀಪ್‍ನಲ್ಲಿ ಗೃಹರಕ್ಷಕದಳದ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಗಲಾಟೆ ನಡೆಸಿದ್ದಾರೆ.
ಈ ರೀತಿ ಸೇವೆ ಮಾಡಲು ಸಿಕ್ಕ ಗೃಹರಕ್ಷದಳ ಕಮಾಂಡೆಂಟ್ ಸ್ಥಾನವನ್ನು ತನ್ನ ದರ್ಪ ತೋರಿಸಲು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮವಾಗಿ ಅಧ್ಯಕ್ಷರಾಗಿ ತಮ್ಮ ತಂದೆಯವರ ಜೊತೆಗೆ ಸ್ಥಳಿಯ ಪತ್ರಿಕೆಯಾದ ದುರ್ಗದ ವಿಜಯ ಸಂಪಾದಕರಾಗಿ, ಜಿಲ್ಲಾ ಕಾಮಾಂಡೆಂಟ್ ಹುದ್ದೆಯನ್ನು 5 ವರ್ಷ ಪೂರ್ಣಗೊಳಿಸಿ ಪುನಃ 2ನೇ ಬಾರಿ ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಕರ್ತವ್ಯಕ್ಕೆ ಸೇರಿಕೊಂಡಿದ್ದಾರೆ.
ಸಂಧ್ಯಾ ಅವರನ್ನು ಗೃಹರಕ್ಷಕದಳ ಕಮಾಂಡೆಂಟ್ ಹುದ್ದೆಯಿಂದ ವಜಾಗೊಳಿಸಲು ಮಾನ್ಯ ಗೃಹ ಸಚಿವರಿಗೆ ಶಿಫಾರಸ್ಸು ಮಾಡಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಿ ಮೈಲಾರಲಿಂಗೇಶ್ವರ ನಸಿರ್ಂಗ್ ಕಾಲೇಜ್ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು. ಹಾಗೂ ಸಂಸ್ಥೆಯ ಕಾರ್ಯದರ್ಶಿ ಸೇರಿ ಇತರರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಗೃಹ ಸಚಿವರಿಗೆ, ಪೊಲೀಸ್ ಮಹಾನಿರ್ದೇಶಕರು, ಗೃಹರಕ್ಷಕರ ದಳ ಮತ್ತು ಅಗ್ನಿಸಾಮಕ ದಳ ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರಿಗೆ ಒತ್ತಾಯಿಸಲಾಯಿತು ಎಂದು
ದಲಿತ ಸಂಘರ್ಷ ಸಮಿತಿ(ರಿ), ರಾಜ್ಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.