ಚಿತ್ರದುರ್ಗ : ಟೆಂಡರ್ ಪದ್ದತಿಯಡಿ ಕೆಲಸ ಮಾಡುವ ಎಲ್ಲರೂ ಸಂಘಟನೆಯೊಳಗೆ ಬರದಿದ್ದರೆ ಎಷ್ಟು ಹೋರಾಟ ಮಾಡಿದರೂ ನಿಮ್ಮ ಬೇಡಿಕೆಗಳನ್ನು ಯಾವ ಸರ್ಕಾರಗಳು ಈಡೇರಿಸುವುದಿಲ್ಲ. ಹಾಗಾಗಿ ಎದೆಗುಂದದೆ ಸಂಘಟಿತರಾಗಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಪೌರ ಕಾರ್ಮಿಕರಿಗೆ ಕರೆ ನೀಡಿದರು.
ಸೇವೆ ಖಾಯಂ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನಡೆಸುತ್ತಿರುವ ನಾಲ್ಕನೆ ದಿನದ ಧರಣಿಗೆ ಕಾಂಗ್ರೆಸ್‍ನಿಂದ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಿ.ಎಸ್.ಮಂಜುನಾಥ್ ಇದು ರಾಜ್ಯದ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ.
1994 ರಲ್ಲಿ ಪ್ರಥಮವಾಗಿ ಮುಷ್ಕರ ನಡೆಸಿದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡರು ಹತ್ತು ಸಾವಿರ ದಿನಗೂಲಿ ನೌಕರರನ್ನು ಖಾಯಂಗೊಳಿಸಿದರು.
ಮತ್ತೆ 1998 ರಲ್ಲಿ ಮುಷ್ಕರ ಆರಂಭಿಸಿದಾಗ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಮತ್ತೆ ಹತ್ತು ಸಾವಿರ ಪೌರಕಾರ್ಮಿಕರನ್ನು ಖಾಯಂ ಮಾಡಿದರು. ನಮ್ಮ ಹೋರಾಟಗಳಿಂದ ಕೆಲವು ದಿನಗೂಲಿಗಳು ಈಗ ಕಮಿಷನರ್‍ಗಳಾಗಿದ್ದಾರೆ. ಸಂಘಟನೆಗೆ ಅಂತಹ ಶಕ್ತಿಯಿದೆ. ಅದಕ್ಕಾಗಿ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್, ವಾಲ್‍ಮ್ಯಾನ್‍ಗಳು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು ಎಂದು ಎಚ್ಚರಿಸಿದರು.
ಪೌರ ಕಾರ್ಮಿಕರಿಂದ ಹಿಡಿದು ಕಮೀಷನರ್‍ಗಳು ನಿರಂತರವಾಗಿ ಹೋರಾಟದಲ್ಲಿದ್ದುಕೊಂಡು ಸಂಘಟನೆಯೊಳಗೆ ಬಂದರೆ ನೀವುಗಳು ಖಾಯಂ ನೌಕರರಾಗುತ್ತೀರ. ಇಲ್ಲವಾದರೆ ಎಲ್ಲಿಯವರೆಗೂ ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್.ಎಲ್ಲಾ ಸರ್ಕಾರಗಳಲ್ಲಿಯೂ ಪೌರ ಕಾರ್ಮಿಕರ ಸೇವೆ ಖಾಯಂಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ತಕ್ಕ ಮಟ್ಟಿಗೆ ಮೋಸ ಮಾಡಿಕೊಂಡು ಬರುತ್ತಿವೆ. ಮುಷ್ಕರ ಎಂದಾಕ್ಷಣ ಎಲ್ಲಾ ಬೇಡಿಕೆಗಳು ಈಡೇರುವುದಿಲ್ಲ. ಕಾನೂನು ತೊಡಕುಗಳು ಇರುತ್ತವೆ. ಎಸ್.ಎಸ್.ಎಲ್.ಸಿ. ಪಾಸಾದ 27 ಪೌರ ಕಾರ್ಮಿಕರು ನಮ್ಮ ಹೋರಾಟದ ಫಲವಾಗಿ ಚೀಫ್ ಆಫೀಸರ್‍ಗಳಾಗಿದ್ದಾರೆ. 27 ಸಾವಿರ ಪೌರ ಕಾರ್ಮಿಕರು ಟೆಂಡರ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಒಂದರಲ್ಲಿಯೇ ಹನ್ನೊಂದು ಸಾವಿರ ಪೌರ ಕಾರ್ಮಿಕರು ದಿನಗೂಲಿಗಳಾಗಿದ್ದಾರೆ. ಟೆಂಡರ್ ಬೇಡವೇ ಬೇಡ ಎನ್ನುವ ಹೋರಾಟ ನನ್ನದು ಮೊದಲಿನಿಂದಲೂ ಇತ್ತು. ಅದಕ್ಕೆ ನೀವುಗಳು ಯಾರು ಬೆಂಬಲಿಸಲಿಲ್ಲ.
ಖಾಯಂ ಕೆಲಸಕ್ಕೆ ಟೆಂಡರ್ ಕರೆಯಬಾರದೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ ಟೆಂಡರ್ ಮೂಲಕವೇ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿ ಯೋಗ್ಯರಿಗೆ ಮತ ಹಾಕದೆ ಕಾರಣ ನೀವುಗಳು ಇನ್ನು ನರಳುತ್ತೀದ್ದೀರ ಎಂದು ಹೇಳಿದರು.
ಒಂದು ಸಂಘಟನೆಯಿದ್ದರೆ ಹೋರಾಟ ಯಶಸ್ವಿಯಾಗುತ್ತದೆ. ಐವತ್ತು ಸಂಘಟನೆಯಾದರೆ ಹೋರಾಟ ಹಾಳಾಗುತ್ತದೆ. ಸರ್ಕಾರಕ್ಕೆ ಸುಪ್ರೀಂ ಪವರ್ ಇದೆ. ಸಬ್‍ಇನ್ಸ್‍ಪೆಕ್ಟರ್ ಹಾಗೂ ಕೆ.ಎ.ಎಸ್.ಅಧಿಕಾರಿಗಳನ್ನು ಸ್ಪೆಷಲ್ ರೂಲ್ ತಂದು ನೇಮಕ ಮಾಡಿಕೊಳ್ಳಲು ಯಾವ ಕಾನೂನು ತೊಡಕಿಲ್ಲ. ಹೇಸಿಗೆ ತೆಗೆದು ಇಡಿ ನಗರವನ್ನು ಸ್ವಚ್ಚವಾಗಿಡುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಸರ್ಕಾರಕ್ಕೆ ಏಕೆ ಮನಸ್ಸಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸ್ಪೆಷಲ್ ರೂಲ್ ತಂದು ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬಹುದು. ಅಧಿಕಾರದಲ್ಲಿರುವ ಬಿಜೆಪಿ.ಗೆ ಇದೊಂದು ಒಳ್ಳೆ ಅವಕಾಶ.
ಶಾಸಕರು, ಸಚಿವರು, ವಿರೋಧ ಪಕ್ಷದಲ್ಲಿರುವ ದಲಿತ ಶಾಸಕರುಗಳು ವಿಧಾನಸಭೆಯಲ್ಲಿ ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದರು.
ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‍ರವರಲ್ಲಿ ಮನವಿ ಮಾಡಿದ್ದೇನೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷನಾಗಿ ನಾನು ನಿಮ್ಮನ್ನು ನೊಂದಣಿ ಮಾಡಿಸಿಕೊಳ್ಳಬಹುದು. ಆದರೆ ನಿಮ್ಮದೆ ಆದ ಸಂಘಟನೆ ಹೋರಾಟವಿದ್ದರೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಪೌರ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಸಮಿತಿ, ರಾಜ್ಯ ಸಮಿತಿ ಮಾಡಿಕೊಂಡು ಹೋರಾಟವನ್ನು ಚುರುಕುಗೊಳಿಸಿ. ನಿಮ್ಮ ಜೊತೆ ಸದಾ ನಾನಿರುತ್ತೇನೆ. ಸರ್ಕಾರಗಳು ನಿಮ್ಮನ್ನು ಖಾಯಂ ಮಾಡಲ್ಲ ಎಂದರೆ ಎದೆಗುಂದುವುದು ಬೇಡ. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಜೊತೆ ನಿಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಈಗಲೆ ಹೊರಟಿದ್ದೇನೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಪೌರ ಕಾರ್ಮಿಕರು ಹೊರಗುತ್ತಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾಲ್ಕು ದಿನಗಳಿಂದಲೂ ಧರಣಿ ನಡೆಸುತ್ತಿದ್ದು, ಸರ್ಕಾರ ಗಮನ ಹರಿಸಿ ಖಾಯಂಗೊಳಿಸಬೇಕು. ಒಂದು ವೇಳೆ ಈಡೇರಿಸದಿದ್ದರೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್‍ಗಳನ್ನು ಖಾಯಂಗೊಳಿಸುತ್ತೇವೆ. ಅದಕ್ಕಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಬೇಕೆಂದು ಜಿ.ಎಸ್.ಮಂಜುನಾಥ್‍ರವರಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ಜಿ.ಪಂ.ಮಾಜಿ ಸದಸ್ಯ ಶಿವಮೂರ್ತಿ, ಚೋಟು, ಹೆಚ್.ಶಬ್ಬೀರ್‍ಭಾಷ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ನಗರಸಭೆ ಪೌರಾಯುಕ್ತರಾದ ಜಿ.ಟಿ.ಹನುಮಂತರಾಜು, ವ್ಯವಸ್ಥಾಪಕಿ ಮಂಜುಳ, ರೇಣುಕ, ಆರೋಗ್ಯ ನಿರೀಕ್ಷಕಿ ಸರಳ, ದುರುಗೇಶ್, ಚಿಕ್ಕಣ್ಣ, ರಾಜಪ್ಪ ಇವರುಗಳು ಪ್ರತಿಭಟನೆಯಲ್ಲಿದ್ದರು.