ಚಿತ್ರದುರ್ಗ,(ಜ.16): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ರೀತಿಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಜನರಿಂದ ಗಂಭೀರ ಆರೋಪಗಳು ಕೇಳಿ ಬಂದಿದೆ.
ಹೀಗಾಗಿ ಸರ್ಕಾರ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಘು ಆಚಾರ್, ನಾನು ಎಂಟತ್ತು ತಿಂಗಳುಗಳಿಂದ ಚಿತ್ರದುರ್ಗ ನಗರ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಕ್ಷೇತ್ರ ಪ್ರವಾಸದ ವೇಳೆ ಜನರು ನನ್ನ ಬಳಿ ಹಾಲಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ ಅವರ ವಿರುದ್ದ 25ರಿಂದ 40% ವರೆಗೆ ಕಮಿಷನ್ ಕೇಳುತ್ತಾರೆ, ನಮ್ಮೂರಿನ ರಸ್ತೆಗಳು ಸರಿಯಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದಕ್ಕೆ ಪೂರಕ ಉದಾಹರಣೆಗಳು ನಾನು ಕ್ಷೇತ್ರದ ಪ್ರವಾಸದ ವೇಳೆ ಕಂಡು ಬಂದಿದ್ದು, ಗುತ್ತಿಗೆದಾರರು ಸಹಾ ಜಿ.ಹೆಚ್. ತಿಪ್ಪಾರೆಡ್ಡಿ ಅವರಿಂದ ಅನುಭವಿಸಿರುವ ಕಮಿಷನ್ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ.
ನನ್ನ ಗಮನಕ್ಕೆ ಬಂದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ, ಎರಡು ಕಿಲೋ ಮೀಟರ್ ದೂರದಿಂದ ಜನರು ತಳ್ಳುವ ಗಾಡಿಗಳ ಮೂಲಕ ಕುಡಿಯುವ ನೀರು ತರುವ ದೃಶ್ಯಗಳು ಪ್ರತಿ ಗ್ರಾಮದಲ್ಲೂ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ರಸ್ತೆ ವಿಭಜಕಗಳಿಂದ ವಾಹನ ಸವಾರರು ಕಿರಿ ಕಿರಿ ಅನುಭವಿಸುತ್ತಿದ್ದಾರೆ, ಇದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಾ ರೀತಿಯ ಕಾಮಗಾರಿಗಳು ತೀರಾ ಕಳಪೆಯಾಗಿದ್ದು, ಈ ಬಗ್ಗೆ ನನ್ನ ಬಳಿ ಹಲವಾರು ದಾಖಲೆಗಳೂ ಸಹ ಇದೆ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು.
ಅಚ್ಚರಿಯ ಬೆಳವಣಿಗೆ ಎಂಬಂತೆ ಸತಃ ಕಿರಿಕಿರಿ ಅಣುಭವಿಸಿರುವ ಗುತ್ತಿದಾರರ ಸಂಘದ ಕಾರ್ಯದರ್ಶಿ ಮಂಜುನಾಥ್ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಭ್ರಷ್ಟಾಚಾರ ಕುರಿತು ದನಿ ಎತ್ತಿದವರ ವಿರುದ್ದ ದೂರು ದಾಖಲಿಸುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ, ಇದನ್ನೆಲ್ಲಾ ನೋಡಿದರೆ ನಾವು ಪ್ರಜಾ ಪ್ರಭುತ್ವದಲ್ಲಿ ಇದ್ದೇವೆಯಾ ಎಂಬ ಅನುಮಾನ ಮೂಡುತ್ತಿದೆ. ಒಂದು ವೇಳೆ ಗುತ್ತಿಗೆದಾರರಿಗೆ ಏನಾದರೂ ತೊಂದರೆ ಆದರೆ ಶಾಸಕರೇ ಅದರ ನೇರ ಹೊಣೆಗಾರರು. ಹೀಗಾಗಿ ಸರ್ಕಾರ ಇತ್ತ ಗಮನಹರಿಸಿ ಶಾಸಕರ ವಿರುದ್ದ ಆರೋಪ ಮಾಡಿರುವ ಗುತ್ತಿಗೆದಾರರಿಗೆ ಸೂಕ್ತ ರಕ್ಷಣೆ ನೀಡಬೇಕು, ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಜಿ. ರಘು ಆಚಾರ್ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ ತಾಜ್ ಪೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿಸಂಪತ್ ಕುಮಾರ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ವಿಧ್ಯಾರ್ಥಿ ಘಟಕದ ಅಧ್ಯಕ್ಷ ಮುದಾಸಿರ್ ಉಪಸ್ಥಿತರಿದ್ದರು.