ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಫೆ.02) : ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನಡುವೆ ಜಗಳ ಇರುವುದು ನಿಜ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ, ಸಿದ್ಧರಾಮಯ್ಯ ನಡುವೆ ಜಗಳ ಇರಬಹುದು, ಅದನ್ನು ನಾನು ಇಲ್ಲಾ ಎಂದು ಹೇಳುವುದಿಲ್ಲ. ಜಗಳ ಇದ್ದರೂ ಕೂಡ ನಮ್ಮ ಕಾರ್ಯಕರ್ತರು ನಮ್ಮ ಪಕ್ಷದ ಚಿಹ್ನೆಗೆ ಮತ ಹಾಕುವುದು. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಎಲ್ಲಾ ಪಕ್ಷಗಳಲ್ಲೂ ಗುಂಪುಗಳಿವೆ. ಬಿಜೆಪಿಯಲ್ಲಿ ಬಿಎಸ್ ವೈ, ಆರ್ ಎಸ್ ಎಸ್ ಗುಂಪುಗಳಿವೆ. ಜೆಡಿಎಸ್ ಪಕ್ಷದಲ್ಲೂ ಗುಂಪುಗಾರಿಕೆ ಇದೆ. ಹಾಗಾಗಿ ಬಣಗಳ ಸಮಸ್ಯೆ ಇದ್ದರೆ ಹೈಕಮಾಂಡ್ ಬಗೆಹರಿಸಲಿದೆ. ನಮ್ಮಲ್ಲಿ ಗುಂಪುಗಾರಿಕೆಯಿಲ್ಲ, ಇಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಯಾರು ಆಗಬೇಕು ಎಂದು ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದ್ದಾರೆ.
ಕಾಂಗ್ರೆಸ್ ಅಧಿಕಾರ ಹಿಡಿಯುವುದು ಹಗಲು ಗನಸಲ್ಲ, ರಿಯಲ್ ಕನಸು. ಸಿದ್ಧರಾಮಯ್ಯ ಕಾಂಗ್ರೆಸ್ ತೊರೆಯಬಹುದೆಂದು ಹೇಳಿರುವ ಸಚಿವ ಬಿ.ಸಿ.ಪಾಟೀಲ್ ಗೆ ಟಾಂಗ್ ನೀಡಿದ ಸತೀಶ್ ಜಾರಕೀಹೊಳಿ, ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೇಕೆ ಬೇಕು. ಬಿ.ಸಿ.ಪಾಟೀಲ್ ಎಲ್ಲಿ ಇರುತ್ತಾರೆಂಬುದನ್ನು ಮೊದಲು ನೋಡಿಕೊಳ್ಳಲಿ ಎಂದು ವಾಗ್ದಾಳಿ ಮಾಡಿದರು.
ಅಗ್ರಗಣ್ಯ ನಾಯಕ ಸಿದ್ಧರಾಮಯ್ಯ ಸೇವೆ ಪಕ್ಷಕ್ಕೆ ಅವಶ್ಯಕತೆಯಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಜಂಟಿಯಾಗಿ ಕೆಲಸ ಮಾಡುತ್ತಾರೆ. ಇದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕೀಹೊಳಿ ಬಿಜೆಪಿಗೆ ಈಗ ಶಾಸಕರ ಅವಶ್ಯಕತೆ ಇಲ್ಲವಲ್ಲ, ಇನ್ನು 15 ಶಾಸಕರನ್ನು ತೆಗೆದುಕೊಂಡು ಎಲ್ಲಿ ಕೂರಿಸುತ್ತಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಶಾಸಕರು ಯಾರೂ ಸಹ ಪಕ್ಷ ಬಿಟ್ಟು ಹೋಗುವುದೂ ಇಲ್ಲ. ಬೇರೆ ಪಕ್ಷದ ಶಾಸಕರು ಡಿಕೆಶಿ, ಸಿದ್ಧರಾಮಯ್ಯ ಸಂಪರ್ಕದಲ್ಲಿದ್ದಾರೆ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬಂದೇ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ರಘುಮೂರ್ತಿ, ಮಾಜಿ ಸಂಸದ ಚಂದ್ರಪ್ಪ, ತಾಜ್‍ಪೀರ್, ಬಿ.ಟಿ ಜಗದೀಶ್, ಸಂಪತ್, ಮೈಲಾರಪ್ಪ, ಹಾಲೇಶ್, ಸೇರಿದಂತೆ ಇತರರು ಹಾಜರಿದ್ದರು.