ಬೆಂಗಳೂರು: ಕಾಂಗ್ರೆಸ್ ನಲ್ಲೇ ತಮ್ಮ ಸಂಪೂರ್ಣ ಜೀವನವನ್ನು ಸವೆಸಿದ ಪ್ರಣಬ್ ಮುಖರ್ಜಿಯವರು ಆರೆಸ್ಸೆಸ್ ಕಾರ್ಯಾಲಯಕ್ಕೆ ಬಂದು ಆರೆಸ್ಸೆಸ್ ಕಾರ್ಯವೈಖರಿ ಗಮನಿಸಿ ಶಹಬ್ಬಾಶ್ ಗಿರಿ ನೀಡಿದ್ದರು ಎಂದು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಹುದೊಡ್ಡ ನಾಯಕರಾದ ಜನಾರ್ಧನ ಪೂಜಾರಿಯವರು ಸ್ವಯಂಸೇವಕರನ್ನು ಶ್ಲಾಘಿಸುತ್ತೇನೆ ಹಾಗೂ ಗೌರವಿಸುತ್ತೇನೆ, ಅವರು ನನ್ನ ದೇವಸ್ಥಾನಕ್ಕೆ ಬಂದಾಗ ಕಾಲಿಗೆ ಬಿದ್ದು ಗೌರವಿಸಿದ್ದೇನೆ ಎಂದು ಹೇಳಿದ್ದು ಇಂದಿಗೂ ವೈರಲ್ ಆಗುತ್ತಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾದ ಸಂದರ್ಭದಲ್ಲಿ ಆರೆಸ್ಸೆಸ್ ಮಾದರಿಯಲ್ಲಿ ಪಕ್ಷ ಸಂಘಟಿಸಲು ಶ್ರಮಿಸುವುದಾಗಿ ಹೇಳಿದ್ದರು. ಅದಾದ ಬಳಿಕ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿಯವರು ಸೇವಾದಳದ ಮೂಲಕ ಆರೆಸ್ಸೆಸ್ ಮಾದರಿಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವುದಾಗಿ ತಿಳಿಸಿದ್ದರು. ಇವೆಲ್ಲವೂ ಆರೆಸ್ಸೆಸ್ ಅನ್ನು ಶ್ಲಾಘಿಸುವ ವಿಚಾರ. ಇನ್ನೊಂದೆಡೆ ಇಂದು ಸಿದ್ದರಾಮಯ್ಯ ಅವರು ಆರೆಸ್ಸೆಸ್ನಿವರು ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಇವರ ತಲೆ ಸರಿ ಇಲ್ಲವೇ ಅಥವಾ ಅವರ ಪಕ್ಷದ ಮುಖಂಡರ ತಲೆ ಸರಿ ಇಲ್ಲವೇ ಎಂಬುದನ್ನು ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.
ಯಾರೀ ಸಿದ್ದರಾಮಯ್ಯ, ಕಾಂಗ್ರೆಸ್‌ನಲ್ಲಿ ಹುಟ್ಟಿಬಂದವರಾ ಎಂದು ಕೇಳಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಂದ ವ್ಯಕ್ತಿ ಅವರು ಎಂದು ನುಡಿದರು. ಸಿದ್ದರಾಮಯ್ಯ ಈ ಕಾಂಗ್ರೆಸ್‌ಗೆ ದೊಡ್ಡ ಶನಿ ಎಂದು ಜನಾರ್ದನ ಪೂಜಾರಿಯವರೇ ತಿಳಿಸಿದ್ದರು. ಈ ಶನಿ ಹೋಗುವ ವರೆಗೆ ಕಾಂಗ್ರೆಸ್ ಇನ್ನು ಉದ್ಧಾರವಾಗದು ಎಂದಿದ್ದರು. ಒಂದುವೇಳೆ ಅವರು ಕಾಂಗ್ರೆಸ್‌ನಲ್ಲೇ ಇದ್ದರೆ ಈ ಕಾಂಗ್ರೆಸ್ ಉಳಿಯದು ಎಂದು ಅವರು ಸ್ಪಷ್ಟಮಾತುಗಳಲ್ಲಿ ತಿಳಿಸಿದ್ದರು ಎಂದರು.
ಸಿದ್ದರಾಮಯ್ಯ ಒಬ್ಬ ಅಲೆಮಾರಿ. ಬಹುದೊಡ್ಡ ನಾಯಕ ಎಂದು ಅವರನ್ನು ಯಾರೂ ತೀರ್ಮಾನ ಮಾಡಿಲ್ಲ. ನಾಯಕರಾದವರು ಒಂದು ದೊಡ್ಡ ಶಕ್ತಿಯೊಂದಿಗೆ ಪಕ್ಷ ಕಟ್ಟುತ್ತಾರೆ. ಜನತಾದಳದಲ್ಲಿ ಅವಕಾಶ ಸಿಗಲಾರದೆಂದು ತಿಳಿದು ಕಾಂಗ್ರೆಸ್ಗೆಒ ಬಂದ ಇವರು ಯಾವ ನಾಯಕರು ಎಂದು ಪ್ರಶ್ನಿಸಿದರು. “ಅನ್ನ ಹಳಸಿತ್ತು…ನಾಯಿ ಹಸಿದಿತ್ತು” ಎಂಬುದು ಸಿದ್ದರಾಮಯ್ಯನವರಿಗೆ ತಕ್ಕ ಪದ ಎಂದು ನುಡಿದರು. ಅವರ ಭಾಷೆಯಲ್ಲೇ ಉತ್ತರ ಕೊಟ್ಟರೆ ಅವರಿಗೆ ಅರ್ಥವಾಗುತ್ತದೆ ಎಂದರು.