ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ರಸ್ತೆ ಬದಿಯಲ್ಲಿ ಟೆಂಟ್, ಡೇರೆಗಳನ್ನು ಹಾಕಿಕೊಂಡು ನಿಕೃಷ್ಟವಾಗಿ ಬದುಕುತ್ತಿರುವ ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಏ.21 ಮತ್ತು 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-1 ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರಶೆಟ್ಟಿ ಮಂಗಳೂರು ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಲೆಮಾರಿ ಅರೆಅಲೆಮಾರಿಗಳಿಗೆ ಬದುಕು ಕಟ್ಟಿಕೊಡುವುದಕ್ಕಾಗಿ ಸಚಿವರುಗಳಾದ ಶಿವರಾಜ್ ತಂಗಡಗಿ, ಜಮೀರ್ ಅಹಮದ್ ಇವರುಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿದ್ದಾಗ ರಾಜ್ಯಾದ್ಯಂತ ಪ್ರವಾಸ ಮಾಡಿ ಅಲೆಮಾರಿಗಳ ಶೋಚನೀಯ ಬದುಕನ್ನು ಕಣ್ಣಾರೆ ಕಂಡಿದ್ದೇನೆ. ಡೇರೆಯೂ ಇಲ್ಲದೆ. ಗುಡಿಸಲು ಇಲ್ಲದೆ ಮಳೆ ಗಾಳಿ ಚಳಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಧರಣಿಗೆ ಮುಂದಾಗಿದ್ದೇವೆಂದು ಹೇಳಿದರು.

ಹತ್ತು ವರ್ಷಗಳ ಕಾಲ ಟೆಂಟ್‍ಗಳ ವಾಸಿಸುತ್ತಿರುವ ಅಲೆಮಾರಿ ಅರೆಅಲೆಮಾರಿಗಳಿಗೆ ಅವರು ಇರುವ ಕಡೆಯೆ ಜಾಗ ಕೊಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಸಮುದಾಯ ಭವನ ನಿರ್ಮಾಣವಾಗಬೇಕು. ಅಂತ್ಯ ಸಂಸ್ಕಾರಕ್ಕಾಗಿ ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಅಲೆಮಾರಿ ರುದ್ರಭೂಮಿಯಾಗಬೇಕು. ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು. ನೀಟ್ ಮತ್ತು ಸಿ.ಇ.ಟಿ. ಪರೀಕ್ಷೆ ಬರೆಯುವ ಮಕ್ಕಳು ತೊಂದರೆ ಅನುಭವಿಸುತ್ತಿರುವುದರಿಂದ ಎಸ್.ಸಿ. ಎಸ್.ಟಿ. ಮಕ್ಕಳಿಗೆ ಅನುಸರಿಸುತ್ತಿರುವ ಮಾನದಂಡ ಅಲೆಮಾರಿ ಮತ್ತು ಅರೆಅಲೆಮಾರಿ ಮಕ್ಕಳಿಗೂ ಅನ್ವಯವಾಗಬೇಕು. ಕಲಾವಿದರಿಗೆ, ಅಂಗವಿಕಲರಿಗೆ, ವೃದ್ದಾಪ್ಯ ವೇತನ ನೀಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿಯಲ್ಲಿ ಜಿಲ್ಲೆಯಲ್ಲಿರುವ ಅಲೆಮಾರಿ ಮತ್ತು ಅರೆಅಲೆಮಾರಿಗಳು ತಪ್ಪದೆ ಭಾಗವಹಿಸುವಂತೆ ಕೆ.ರವೀಂದ್ರಶೆಟ್ಟಿ ಮಂಗಳೂರು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ್ ಎಂ. ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್‍ಜೋಗಿ, ಗೌರವಾಧ್ಯಕ್ಷ ರಾಮುಗೋಸಾಯಿ, ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್, ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥ್, ಕುಬೇರದಾಸ್, ತಿಪ್ಪೇಸ್ವಾಮಿ, ಕೊಟ್ರೇಶ್, ಗಿರೀಶ್‍ಜೋಗಿ, ತಿಮ್ಮಯ್ಯ ಮ್ಯಾಕ್ಲೂರಹಳ್ಳಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


