ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥ ಪೀಠದಲ್ಲಿ ಜೂ.3 ಮತ್ತು 4 ರಂದು ಅಖಿಲ ಭಾರತ ಭಗೀರಥ ಜಯಂತ್ಯೋತ್ಸವ, ಉಪ್ಪಾರರ ಬೃಹತ್ ಸಮಾವೇಶ, ಸಾಮೂಹಿಕ ವಿವಾಹ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಭಗೀರಥ ದೇವಸ್ಥಾನ ಪ್ರಸಾದ ನಿಲಯ, ಸಿಸಿ.ರಸ್ತೆ, ಸಭಾ ಮಂಟಪ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದು ನಿವೃತ್ತ ಡಿ.ವೈ.ಎಸ್ಪಿ.ಹಾಗೂ ಭಗೀರಥ ಉಪ್ಪಾರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ನಾಗರಾಜ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
3 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರದಿಂದ ಆಚರಿಸುವ ಎಲ್ಲಾ ಜನಾಂಗಗಳ ಶರಣರ ಹಾಗೂ ಮಹಾನ್ ದಾರ್ಶನಿಕರ ಭಾವಚಿತ್ರಗಳೊಂದಿಗೆ ಪೂರ್ಣಕುಂಭ ಮೇಳ ಹಾಗೂ ವಿವಿಧ ಕಲಾ ತಂಡಗಳಿಂದ ಹೊಸದುರ್ಗ ಪಟ್ಟಣದಿಂದ ಭವ್ಯ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಮತ್ತು ಗಣ್ಯರಿಗೆ ಸನ್ಮಾನ. ಸಂಜೆ 5 ಕ್ಕೆ ಧಾರ್ಮಿಕ ಕಾರ್ಯಕ್ರಮ ನಂತರ ನಗೆ ಹಬ್ಬ ಸಾಂಸ್ಕೃತಿಕೋತ್ಸವ ಜರುಗಲಿದೆ.
ಜೂ.4 ರಂದು ಬೆಳಿಗ್ಗೆ 11 ಗಂಟೆಗೆ ಉಪ್ಪಾರರ ಬೃಹತ್ ಸಮಾವೇಶ, ಭಗೀರಥ ಜಯಂತ್ಯೋತ್ಸವ, ಧಾರ್ಮಿಕ ಸಮಾರಂಭ ನಡೆಯಲಿದೆ.
ಸಾಣೆಹಳ್ಳಿ ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮುರುಘಾಮಠದ ಡಾ.ಶಿವಮೂರ್ತಿ ಶರಣರು ಸೇರಿದಂತೆ 25 ರಾಜ್ಯಗಳ ಮಠಾಧೀಶರುಗಳು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರುಗಳು ಎರಡು ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ವೀರೇಶ್ ಮಾತನಾಡಿ ಕುಲಶಾಸ್ತ್ರ ಅಧ್ಯಯನವಾಗಿರುವುದರಿಂದ ಉಪ್ಪಾರ ಜನಾಂಗವನ್ನು ಎಸ್ಟಿ.ಗೆ ಸೇರ್ಪಡೆಗೊಳಿಸಬೇಕು. ಉಪ್ಪಾರ ಜನಾಂಗದ ಅಭಿವೃದ್ದಿ ನಿಗಮಕ್ಕೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಸಮಾರಂಭದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್.ಮಹೇಶ್, ಬಸವರಾಜ್ ಹಂಪಯ್ಯನಮಾಳಿಗೆ, ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.