ನೀರಿನ ವಿಚಾರದಲ್ಲಿ ಎಲ್ಲ ರೈತರೂ ಒಂದೇ : ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ

2 Min Read

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಭೂ ಸ್ವಾಧೀನದ ಅಡೆ ತಡೆ ನಿವಾರಣೆಗೆ ಮುಖ್ಯಮಂತ್ರಿ ಬಳಿ ಮಾತನಾಡುವುದಾಗಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಸದ್ದರ್ಮ ಪೀಠದಲ್ಲಿ ಶ್ರೀಗಳ ಭೇಟಿಯಾಗಿ ಮಾತುಕತೆ ನಡೆಸಿದಾಗ ಈ ಭರವಸೆ ವ್ಯಕ್ತವಾಗಿದೆ. ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ರೈತರು ಅಡ್ಡಿ ಪಡಿಸುತ್ತಿದ್ದಾರೆ.  ಅಡ್ಡಿ ನಿವಾರಣೆ ಆಗಿದ್ದರೆ ಈ ವರ್ಷ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳ ಭರ್ತಿ ಮಾಡಬಹುದಿತ್ತು. ಅದು ಸಾಧ್ಯವಾಗದೇ ಹೋಗಿದೆ ಎಂಬ ಸಂಗತಿಯ ಸಮಿತಿ ಪದಾಧಿಕಾರಿಗಳು ಶ್ರೀಗಳ ಗಮನಕ್ಕೆ ತಂದರು.

ಭದ್ರಾ ಮೇಲ್ದಂಡೆಯಡಿ ಕಾತ್ರಾಳು, ಯಳಗೋಡು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಕವಾಗಿದೆ. ಚಿತ್ರದುರ್ಗ ಬ್ರಾಂಚ್  ಕಾಲುವೆ ಹಾಯ್ಕಲ್  ನಿಂದ ಕೊಳವೆ ಮಾರ್ಗದ ಮೂಲಕ ಈ ಕೆರೆಗಳ ಅರ್ಧದಷ್ಟು ತುಂಬಿಸಲಾಗುತ್ತಿದೆ.  ಆದರೆ ಇದಕ್ಕೂ ಮೊದಲು ತಾವು ತುಂಗ ಭದ್ರಾದಿಂದ ಈ ಕೆರೆಗಳಿಗೆ ನೀರು ತರಲು ಮುಂದಾಗಿರುವುದು ಜಿಲ್ಲೆಯ ಜನ ಸಂತಸ ಪಟ್ಟಿದ್ದಾರೆ. ಈಗಾಗಲೇ ಕಾತ್ರಾಳು ಕೆರೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.  ಸದ್ದಿಲ್ಲದೇ ತಾವು ಕೈಗೊಂಡಿರವ ಜಲ ತಪಸ್ವಿ ನಿಲುವುಗಳಿಗೆ ವ್ಯಾಪಕ ಜನ ಮನ್ನಣೆ ಪ್ರಾಪ್ತವಾಗಿದೆ ಎಂದು  ಸಮಿತಿ ಪದಾ„ಕಾರಿಗಳು ಶ್ರೀಗಳ ಗಮನಕ್ಕೆ ತಂದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ತುಂಗಭದ್ರಾದಿಂದ  ಈಗಾಗಲೇ ಭರಮಸಾಗರ ಕೆರೆಗೆ ನೀರು ತರಲಾಗಿದೆ. ಅಲ್ಲಿಂದ ಕಾತ್ರಾಳು ಸೇರಿದಂತೆ ಇತರೆ ಕೆರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸಿರಿಗೆರೆ ಕ್ರಾಸ್‍ನಲ್ಲಿ  ರಾಷ್ಟ್ರೀಯ ಹಾದು ಕೊಳವೆ ಮಾರ್ಗ ಹೋಗಬೇಕಾಗಿದೆ. ಅಲ್ಲದೆ ಪೆಟ್ರೋಲ್  ಬಂಕ್  ಬಳಿ ಕೊಳವೆ ಮಾರ್ಗ ಹೋಗಲು ಒಂದಿಷ್ಟು ತಕರಾರು ಬಂದಿವೆ. ಅವೆಲ್ಲವ ಮಾತುಕತೆ ಮೂಲಕ ಬಗೆ ಹರಿಸುತ್ತಿದ್ದೇವೆ. ಈ  ಅಡ್ಡಿಗಳು ನಿವಾರಣೆಯಾದಲ್ಲಿ  ಕಾತ್ರಾಳು ಕೆರೆಗೆ ಸರಾಗವಾಗಿ  ನೀರು ಹರಿಯಲಿದೆ. ವಿದ್ಯುತ್ ಸಮಸ್ಯೆ ಬಗೆ ಹರಿದಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಕಾತ್ರಾಳು ಮಾರ್ಗದ ಪೈಪ್ ಲೈನ್ ಮೂಲಕ ಸುಲ್ತಾನಿಪುರ ಕೆರೆಗೆ ನೀರು ಹಾಯಿಸಲಾಗುತಿತ್ತು. ಆದರೆ ಅಧಿಕಾರಿಗಳು ಭದ್ರಾ ಮೇಲ್ದಂಡೆಯಡಿ ಸುಲ್ತಾನಿಪುರ ಕೆರೆಗೆ ನೀರು ಬರುವುದರಿಂದ ಪ್ರಸ್ತಾವ ಕೈ ಬಿಡಲಾಗಿದೆ ಎಂದು ಹೇಳುತ್ತಿದ್ದಾರೆ. ಸುಲ್ತಾನಿಪುರ ರೈತರು ನ್ಯಾಯಪೀಠಕ್ಕೆ ಬಂದು ಭದ್ರಾ ಮೇಲ್ದಂಡೆ ನೀರು ಬರಲು ತಡವಾಗುತ್ತಿದೆ. ಇಲ್ಲಿಂದಲೇ ಕೊಡಿ ಎಂದಿದ್ದಾರೆ. ಈ ಬಗ್ಗೆಯೂ ಸದ್ದರ್ಮ ಪೀಠಕ್ಕೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಕರೆಯಿಸಿ ಚರ್ಚಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ಭದ್ರಾ ಮೇಲ್ದಂಡೆಯಡಿ ಜಗಳೂರಿಗೆ 2.6 ಟಿಎಂಸಿ ನೀರು ಕಾಯ್ದಿರಿಸಲಾಗಿದ್ದು ಕಾಮಗಾರಿ ಶೀಘ್ರ ಆರಂಭಿಸುವಂತೆ ಮಾಡಿದ ಮನವಿಗೆ ಶ್ರೀಗಳು ಸ್ಬಂದಿಸಿದರು. ಈ ಸಂಬಂಧ ಸಚಿವರು, ಮುಖ್ಯಮಂತ್ರಿ ಬಳಿ ಮಾತನಾಡುವುದಾಗಿ ಹೇಳಿದರು. ಭದ್ರಾ ಮೇಲ್ದಂಡೆಗೆ ದಾವಣಗೆರೆ ಮಂದಿ ಆಕ್ಷೇಪಿಸುತ್ತಿರುವುದು ಸರಿಯಾದುದಲ್ಲ. ನೀರಿನ ವಿಚಾರದಲ್ಲಿ ಎಲ್ಲ ರೈತರೂ ಒಂದೇ.  ಭದ್ರಾ ತುಂಬಿ ನೀರು ಹೊರ ಹೋಗುತ್ತಿದೆಯಲ್ಲ ಎಂದು ತರಳಬಾಳು ಶ್ರೀಗಳು ಹೇಳಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಉಪಾಧ್ಯಕ್ಷ ರಾದ  ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಧನಂಜಯ, ಹೋರಾಟ ಸಮಿತಿಯ ಜಿ.ಬಿ.ಶೇಖರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *