ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ಪ್ರತಿಯೊಬ್ಬರ ಜೀವನದಲ್ಲಿ ಬೆಳಗಿನಿಂದ ರಾತ್ರಿವರೆಗೂ ನಡೆಯುವ ಕಾರ್ಯಗಳು ಯೋಗಮಯವಾಗಿರಬೇಕೆಂದು ಅಂತರಾಷ್ಟ್ರೀಯ ಯೋಗ ಗುರು ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ ತಿಳಿಸಿದರು.
ಪತಂಜಲಿ ಯೋಗ ಪೀಠ ಹರಿದ್ವಾರದ ಮಾರ್ಗದರ್ಶನದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನಿ ಟ್ರಸ್ಟ್ ವತಿಯಿಂದ ವಾಸವಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್‍ಗಳನ್ನು ವಿತರಿಸಿ ಮಾತನಾಡಿದರು.
ಯೋಗದಿಂದ ಎಲ್ಲಾ ತರಹದ ನೋವು, ರೋಗಗಳು ನಿವಾರಣೆಯಾಗಿ ಮನಸ್ಸು ಸಮಾಧಾನದಿಂದ ಇರುತ್ತದೆ. ರಾಜ್ಯದ 31 ಜಿಲ್ಲೆಗಳಲ್ಲಿ ಯೋಗ ಶಿಕ್ಷಕರ ತರಬೇತಿ ನಡೆಸಿ ಮಾನಸಿಕ ಮತ್ತು ದೈಹಿಕವಾಗಿ ಖುಷಿ ನೀಡುವುದು ನಮ್ಮ ಸಂಕಲ್ಪ. ಜೀವನದಲ್ಲಿ ಯೋಗ ಇಲ್ಲದಿದ್ದರೆ ತೃಪ್ತಿ ಸಿಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ದಿನಕ್ಕೆ ಒಂದು ಗಂಟೆಯಾದರೂ ಯೋಗ ಮಾಡಿ ರೋಗದಿಂದ ದೂರವಿರಿ ಎಂದು ಹೇಳಿದರು.
ಯೋಗ ನಿದ್ರೆ ದೇಹವನ್ನು ಸಂಪೂರ್ಣವಾಗಿ ಹಗುರಗೊಳಿಸುತ್ತದೆ. ಶಿಕ್ಷಣದ ಜೊತೆ ಯೋಗ ಮಕ್ಕಳಿಗೆ ಮುಖ್ಯ ಪಾಠವಾಗಬೇಕು. ಯೋಗದಿಂದ ಸೊಂಟ, ಮೊಣಕಾಲು ನೋವು ನಿವಾರಣೆಯಾಗುತ್ತದೆ. ನನ್ನ ಫೇಸ್‍ಬುಕ್, ಯ್ಯೂಟೂಬ್ ಲೈವ್ ನೋಡಿ ಯೋಗಾಭ್ಯಾಸ ಕಲಿಯಬಹುದು ಎಂದರು.
ಭುಜಂಗಾಸನ, ಅರ್ಧಚಂದ್ರಾಸನ, ಮಕರಾಸನ, ಮರ್ಕಟಾಸನ ಹೀಗೆ ನಾನಾ ಭಂಗಿಯ ಯೋಗಾಭ್ಯಾಸ ಮಾಡಿಸಿದರು. ಭಾರತ ಸ್ವಾಭಿಮಾನಿ ಟ್ರಸ್ಟ್ ಅಧ್ಯಕ್ಷ ದೇವಾನಂದನಾಯ್ಕ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಗುರುಮೂರ್ತಿ, ಉಪಾಧ್ಯಕ್ಷೆ ಶ್ರೀಮತಿ ಲಲಿತಾಬೇದ್ರೆ, ಯುವ ಪ್ರಭಾರಿ ನವೀನ, ಕಿಸಾನ್ ಸೇವಾ ಸಮಿತಿಯ ಕೆಂಚವೀರಪ್ಪ, ಕಾರ್ಯಾಲಯ ಪ್ರಭಾರಿ ರಾಮನರೇಶ್, ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.