ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಜುಲೈ.28) : ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ತಾಲ್ಲೂಕು ಕಚೇರಿಯಲ್ಲಿ ಗುರುವಾರ ತಾಲ್ಲೂಕು ಮಟ್ಟದ ಚಾಲನಾ ಸಮಿತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮಾತನಾಡಿ ತೀವ್ರ ಅತಿಸಾರ ಬೇದಿ ನಿಯಂತ್ರಣಾ ಪಾಕ್ಷಿಕ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ, ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ, ರಾಷ್ಟ್ರೀಯ ಕುಷ್ಟರೋಗ ಪತ್ತೆ ಅಭಿಯಾನ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ, ಕೋವಿಡ್ ಲಸಿಕಾ ಕಾರ್ಯಕ್ರಮಗಳು ಎಲ್ಲರಿಗೂ ತಲುಪಿ ಯಶಸ್ವಿಯಾಗಬೇಕಾದರೆ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಸೂಚಿಸಿದರು.
ಕೋವಿಡ್ ಸಂಪೂರ್ಣವಾಗಿ ನಿಂತಿದೆ ಎಂದು ಭಾವಿಸಿ ಮಾಸ್ಕ್ ಗಳನ್ನು ಧರಿಸುವುದನ್ನೆ ಜನ ಮರೆತಿದ್ದಾರೆ. ಯಾವುದೇ ಕಾರಣಕ್ಕೂ ನಿರ್ಲಕ್ಷೆ ಮಾಡಬಾರದು. ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸುವುದು ಒಳ್ಳೆಯದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡುತ್ತ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮ ಅನುಷ್ಟಾನದ ಕ್ರಿಯಾ ಯೋಜನೆ ರೂಪುರೇಷೆಗಳನ್ನು ಸವಿವರವಾಗಿ ಮಂಡಿಸಿ ತೀವ್ರ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕ ಆ.1 ರಿಂದ 15 ನೇ ತಾರೀಖಿನವರೆಗೂ ಎಲ್ಲಾ ಹಳ್ಳಿಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಓ.ಆರ್.ಎಸ್.ದ್ರಾವಣ ತಯಾರಿಸುವ ವಿಧಾನ ಹೇಳಿಕೊಟ್ಟು ಜಿಂಕ್ ಮಾತ್ರೆಗಳನ್ನು ಆರೋಗ್ಯ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ನೀಡಲಿದ್ದಾರೆ. ಆ.10 ರಿಂದ ಜಂತುಹುಳು ನಿವಾರಣಾ ದಿನವನ್ನು ತಾಲ್ಲೂಕಿನ ಎಲ್ಲಾ ಅಂಗನವಾಡಿ ಮತ್ತು ಶಾಲೆಗಳಲ್ಲಿ ಆಚರಿಸಲಾಗುವುದು. ಅಗತ್ಯ ಮಾತ್ರೆ ತರಬೇತಿಯ ಎಲ್ಲಾ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ಕೋವಿಡ್ ಮುನ್ನೆಚ್ಚರಿಕೆ ಲಸಿಕಾ ವರಸೆಗಳ ಪ್ರಗತಿಯನ್ನು ಸಭೆಗೆ ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವಿಚಾರಕಿ ಹೇಮಾವತಿ, ಸಹಾಯಕ ಶಿಕ್ಷಣಾಧಿಕಾರಿ ಇನಾಯತ್, ತಾಲ್ಲೂಕು ಯೋಜನಾಧಿಕಾರಿ ಡಿ.ರಾಘವೇಂದ್ರ, ಶ್ರೀಧರ್, ದ್ರಾಕ್ಷಾಯಣಮ್ಮ, ಆರೋಗ್ಯ ಸುರಕ್ಷತಾಧಿಕಾರಿ ಡಾ.ಸುಪ್ರಿತ, ಡಾ.ಮಂಜುಳ, ಡಾ.ವಾಣಿ. ಡಾ.ಮಹೇಂದ್ರ, ಅಕ್ಷತಾ, ಪೂಜ, ಅರ್ಪಿತ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು ಸಭೆಯಲ್ಲಿ ಭಾಗವಹಿಸಿದ್ದರು.