ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಸಾಹಿತ್ಯಿಕ, ಸಾಂಸ್ಕೃತಿಕ ಕಲೋತ್ಸವ ಜ.3 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-1 ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಲೆಮಾರಿ, ಅರೆಅಲೆಮಾರಿ, ಹಿಂದುಳಿದ ವರ್ಗಗಳ 46 ಜಾತಿಗಳ ಸಮಸ್ಯೆ, ಜನಜೀವನ, ಮೂಲಕಸುಬು, ಭಾಷೆ, ಸಂಸ್ಕøತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಸಂಚರಿಸಿದಾಗ ಡೇರೆ, ಟೆಂಟು, ಗುಡಿಸಲುಗಳಲ್ಲಿ ಅತ್ಯಂತ ಶೋಚನೀಯವಾಗಿ ಬದುಕುತ್ತಿರುವುದು ಕಂಡು ಬಂದಿತು. ಹಾಗಾಗಿ ಈ ಜನಾಂಗದ ಸಮೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಹೇಳಿದರು.
ಜ.3 ರಂದು ಬೆಳಿಗ್ಗೆ 9 ರಿಂದ ಸಂಜೆಯವರೆಗೆ ಕಲೋತ್ಸವ ನಡೆಯಲಿದೆ.
ಜನಾಂಗದ ಸಾಧಕರು ಹಾಗೂ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಗುವುದು. ರಾಜ್ಯದ ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರುಗಳನ್ನು ಆಹ್ವಾನಿಸಿದ್ದೇವೆ. ಅಲೆಮಾರಿ, ಅರೆಅಲೆಮಾರಿ ಜನಾಂಗ ಅಂದು, ಇಂದು, ಮುಂದು ಎನ್ನುವ ಸ್ಥಿತಿಗತಿ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಆನಂದಪ್ಪ ಜ್ಯೋತಿ, ಗುರುಲಿಂಗಪ್ಪ ಇವರುಗಳು ಮಾತನಾಡಲಿದ್ದಾರೆ. ಈ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಟೆಂಟು, ಗುಡಿಸಲು, ಡೇರೆ ಹಾಕಿಕೊಂಡು ವಾಸ ಮಾಡುತ್ತಿರುವವರ ಹೆಸರಿಗೆ ಜಾಗ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ಸಭಾಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು. ರುದ್ರಭೂಮಿಗೆ ಜಾಗ ಕಾಯ್ದಿರಿಸುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ-1 ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರತಾಪ್‍ಕುಮಾರ್ ಓ.ಜೋಗಿ ಮಾತನಾಡಿ ಕರ್ನಾಟಕದಲ್ಲಿ ಈ ಜನಾಂಗದವರ ಸ್ಥಿತಿ ತುಂಬಾ ಕಷ್ಟದಲ್ಲಿದೆ. ಅದಕ್ಕಾಗಿ ಜ.3 ರಂದು ಬೆಂಗಳೂರಿನಲ್ಲಿ ಸಾಹಿತ್ಯಿಕ ಸಾಂಸ್ಕøತಿಕ ಕಲೋತ್ಸವ ಆಚರಿಸಿ ಸರ್ಕಾರದ ಗಮನ ಸೆಳೆದು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಒಕ್ಕೂಟವು ಅಲೆಮಾರಿ, ಅರೆಅಲೆಮಾರಿ ಜನಾಂಗಗಳ ಕಷ್ಟ-ನಷ್ಠಗಳಿಗೆ ಧ್ವನಿಯಾಗಿ ನಿಂತು ಕೆಲಸ ಮಾಡಲಿದೆ ಎಂದು ಹೇಳಿದರು.
ಗೊಲ್ಲ ಸಮಾಜದ ಲಕ್ಷ್ಮಿಕಾಂತ್, ಹೆಳವ ಜನಾಂಗದ ಶಿವಾನಂದಪ್ಪ, ವಿರುಪಾಕ್ಷಪ್ಪ, ಒಕ್ಕೂಟದ ಕಾರ್ಯಾಧ್ಯಕ್ಷೆ ಇಂದಿರಾ ಎಸ್.ಆರ್. ಜೋಗಿ ಸಮುದಾಯದ ತಿಪ್ಪೇಸ್ವಾಮಿ, ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.