ಸುದ್ದಿಒನ್ : 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ನಡೆಸುತ್ತಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಪ್ರಬಲ ಹಿನ್ನಡೆಯಾಗುವ ಸಾಧ್ಯತೆಗಳಿವೆ ! ದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು ಇಂಡಿಯಾ ಮೈತ್ರಿಯನ್ನು ತೊರೆಯಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಪಕ್ಷ ಎನ್ನುವುದು ಗಮನಾರ್ಹ.
2024ರ ಲೋಕಸಭೆ ಚುನಾವಣೆಗೆ ಬಹುತೇಕ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ‘ಇಂಡಿಯಾ’ ರಚನೆ ಮಾಡಿರುವುದು ಗೊತ್ತೇ ಇದೆ . ಆದರೆ, ಮೈತ್ರಿ ಮಾಡಿಕೊಂಡಷ್ಟು ಸುಲಭವಾಗಿ ಗೆಲುವು ಇಲ್ಲ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಎಲ್ಲಕ್ಕಿಂತ ಮುಖ್ಯವಾಗಿ ಸೀಟು ಹಂಚಿಕೆ ವಿಚಾರದಲ್ಲಿ ತಲೆನೋವಾಗುವಾಗಿ ಪರಿಣಮಿಸಿದೆ ಎಂಬುದು ಅವರ ಅಭಿಪ್ರಾಯ. ಆದರೆ 2024ರ ಚುನಾವಣೆಗೂ ಮುನ್ನವೇ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ!
5 ರಾಜ್ಯಗಳ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಇದರಲ್ಲಿ ಮಧ್ಯಪ್ರದೇಶವೂ ಸೇರಿದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸ್ವಲ್ಪ ಖ್ಯಾತಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು ನಾವು ಪ್ರಬಲವಾಗಿರುವ ಸ್ಥಾನಗಳಲ್ಲಿ ನಮಗೆ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಕೊಡಬೇಕೆಂದು ಕೇಳಿತ್ತು. ಆದರೆ ಇದನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಇದೀಗ 18 ವಿಧಾನಸಭಾ ಕ್ಷೇತ್ರಗಳಲ್ಲಿ ಪರಸ್ಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
” ನಾನು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದೇನೆ. ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷದ ಸಾಧನೆಯ ಬಗ್ಗೆ ನಾನು ವಿವರಿಸಿದ್ದೇನೆ. ನಮ್ಮ ಶಾಸಕರು ಈ ಹಿಂದೆ ಎಲ್ಲೆಲ್ಲಿ ಗೆದ್ದಿದ್ದರು ? ಎಲ್ಲೆಲ್ಲಿ ಎರಡನೇ ಸ್ಥಾನ ಪಡೆದಿದ್ದರು ? ಎಂಬ ಮಾಹಿತಿಯನ್ನು ನೀಡಿದ್ದೇನೆ. ನಮಗೆ 6 ಸ್ಥಾನಗಳನ್ನು ನೀಡುವ ಬಗ್ಗೆ ಯೋಜಿಸಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಈವರೆಗೂ ಅಭ್ಯರ್ಥಿಗಳನ್ನು ಘೋಷಿಸುವ ಬಗ್ಗೆ ಅದರ ಪ್ರಸ್ತಾಪವಿಲ್ಲ. ರಾಜ್ಯದಲ್ಲಿ ಮೈತ್ರಿ ಇಲ್ಲ ಎಂದು ನನಗೆ ಮೊದಲೇ ತಿಳಿದಿದ್ದರೆ, ನಾನು ಅವರನ್ನು ಭೇಟಿ ಮಾಡುವುದಿರಲಿ, ಕಾಂಗ್ರೆಸ್ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದರು.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಸಮಾಜವಾದಿ ಪಕ್ಷದ ನಾಯಕನ ಮಾತಿಗೆ ತಿರುಗೇಟು ನೀಡುತ್ತಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಮಧ್ಯಪ್ರದೇಶದಲ್ಲಿ ಎಸ್‌ಪಿಗೆ ನಿಜವಾದ ಪ್ರಭಾವವಿಲ್ಲ. ಆ ಪಕ್ಷ ಅಲ್ಲಿ ಸ್ಪರ್ಧಿಸಬಾರದು. ಉತ್ತರ ಪ್ರದೇಶದಲ್ಲಿಯೂ ಕಾಂಗ್ರೆಸ್ ಪಕ್ಷವು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ (80) ಸ್ಪರ್ಧಿಸುತ್ತದೆ ಎಂದು ಅಜಯ್ ರಾಯ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
”ಕಾಂಗ್ರೆಸ್‌ನಲ್ಲಿರುವ ಸಣ್ಣ ನಾಯಕರಿಗೆ ಸಮಾಜವಾದಿ ಪಕ್ಷದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ, ಈ ಕಾಂಗ್ರೆಸ್ ಪಕ್ಷದಲ್ಲಿರುವವರು ಬಿಜೆಪಿ ಜೊತೆಗಿದ್ದಾರೆ, ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಇಲ್ಲ ಎಂದು ತಿಳಿದಿದ್ದರೆ ಮಧ್ಯಪ್ರದೇಶಕ್ಕೆ ನಮ್ಮ ನಾಯಕರನ್ನು ಕಳುಹಿಸುತ್ತಿರಲಿಲ್ಲ. ಕಾಂಗ್ರೆಸ್ ಇತರೆ ಪಕ್ಷಗಳನ್ನು ಕೆಟ್ಟದಾಗಿ ಕಾಣುತ್ತಿದೆ.
ಇಂಡಿಯಾ ಮೈತ್ರಿಯಲ್ಲಿ ಉಳಿಯುವ ಬಗ್ಗೆ ಮರುಪರಿಶೀಲಿಸಬೇಕಾದ ಪರಿಸ್ಥಿತಿ ಇದೆ
ಎಂದ ಅಖಿಲೇಶ್ ಯಾದವ್ ಹೇಳಿದರು.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೀಗೆ ಪರಸ್ಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬಿಜೆಪಿಗೆ ಲಾಭ. ಇವರ ನಡುವೆ ಮತಗಳು ವಿಭಜನೆಯಾದರೆ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಲಿದೆ.