ಚಿತ್ರದುರ್ಗ. ನ.22: ವಾಯುಮಾಲಿನ್ಯದ ಪರಿಣಾಮ ಪರಿಸರ ಕಲುಷಿತವಾಗಿ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮಕ್ಕಳಿಗೆ ಅಪಾಯ ಉಂಟುಮಾಡಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳಸಿಂಗ್ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಮಂಗಳವಾರ ಸಾರಿಗೆ ಇಲಾಖೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಶ್ವಾಸಕೋಶ ಸ್ವಚ್ಛವಾಗಿರಬೇಕಾದರೆ ಉತ್ತಮ ವಾತಾವರಣ, ಪರಿಸರ ಸ್ವಚ್ಛತೆ ತುಂಬಾ ಅಗತ್ಯ.ವಾಹನದಟ್ಟಣೆಯಿಂದಾಗಿ ಅನಾರೋಗ್ಯ ಸಮಸ್ಯೆ ಉಲ್ಬಣವಾಗಿ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ತಕ್ಷಣ ಪ್ರಭಾವ ಉಂಟಾಗಿ ನೆಗಡಿ, ಕೆಮ್ಮಿನಂತ ಕಾಯಿಲೆ ಪದೇ ಪದೇ ಪುನರಾವರ್ತಿತವಾಗುತ್ತಿರುತ್ತದೆ ಎಂದರು.
ಇಂದಿನ ದಿನಮಾನದಲ್ಲಿ ನಮ್ಮ ಗಮನ ವಾಯುಮಾಲಿನ್ಯ ತಡೆಗಟ್ಟುವ ಕಡೆ ಗಮನಹರಿಸಬೇಕಿದೆ. ನಮ್ಮ ಸುತ್ತಲಿನ ಪರಿಸರ ಸಂಪೂರ್ಣ ಗಿಡಮರಗಳಿಂದ ಕೂಡಿದ್ದರೆ ಮಾತ್ರ ವಾಯುಮಾಲಿನ್ಯದ ಅಡ್ಡ ಪರಿಣಾಮ ತಡೆಯಲು ಸಾಧ್ಯ ಎಂದು ತಿಳಿಸಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಸಾರಿಗೆ ಇಲಾಖೆ ಕಚೇರಿ ಅಧೀಕ್ಷಕ ಹೇಮಂತ್ ಕುಮಾರ್ ಮಾತನಾಡಿ, ಪ್ರತಿ ವರ್ಷ ನವೆಂಬರ್ ಮಾಹೆಯಲ್ಲಿ ಸಾರಿಗೆ ಇಲಾಖೆ ವತಿಯಿಂದ ವಾಯುಮಾಲಿನ್ಯ ಮಾಸಾಚರಣೆ ಹಮ್ಮಿಕೊಂಡು, ವಾಹನಗಳಿಂದ ಆಗುವ ಮಾಲಿನ್ಯ ಕಡಿಮೆಗೊಳಿಸುವ ಸಲುವಾಗಿ ವಾಯುಮಾಲಿನ್ಯ ಮಾಸಾಚರಣೆ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದರು.
ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ವೈಯಕ್ತಿಕ ವಾಹನ ಕಡಿಮೆ ಮಾಡಿ, ಸಮೂಹ ಸಾರಿಗೆ ಬಳಸಬೇಕು, ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನ ಬಳಸಿ, ಪರಿಸರ ಸಂರಕ್ಷಿಸಬೇಕು. ಎಲೆಕ್ಟ್ರಾನಿಕ್ ವಾಹನ ಬಳಕೆಯಿಂದ ಶಬ್ಧ ಮಾಲಿನ್ಯ, ವಾಯುಮಾಲಿನ್ಯದಿಂದ ದೂರವಿರಬಹುದು. ವಾಹನದ ತೆರೆಯಲ್ಲಿ ಉಳಿತಾಯವಾಗಲಿದೆ. ಪೆಟ್ರೋಲ್ ಬಂಕ್‍ನಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಸಂಚಾರವೂ ಸುರಕ್ಷಿತವಾಗಿರಲಿದೆ. ಸಾಧ್ಯವಾದಷ್ಟು ಎಲೆಕ್ಟ್ರಿಕಲ್ ವಾಹನ ಬಳಕೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೋಟಾರು ವಾಹನಗಳ ನಿರೀಕ್ಷಕ ಟಿ.ಎಂ.ಪ್ರಕಾಶ್, ಪರಿಸರ ಅಧಿಕಾರಿ ಈ. ಪ್ರಕಾಶ್, ಸರ್ಕಾರಿ ಪಾಲಿಟೆಕ್ನಿಕ್‍ನ ಎಂ.ಸುಧಾ, ನಾಗೇಶ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕೆ.ಜಗದೀಶ್ ಉಪನ್ಯಾಸಕಿ ಸೌಮ್ಯ ಸೇರಿದಂತೆ ಸರ್ಕಾರಿ ಪಾಲಿಟೆಕ್ನಿಕ್ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.