ಸುದ್ದಿಒನ್, ಚಿತ್ರದುರ್ಗ, ಅ.02 : ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮೋಹನ್ ಕರಮಚಂದ ಗಾಂಧಿ, ಉನ್ನತ ವ್ಯಾಸಂಗಕ್ಕೆ ದಕ್ಷಿಣ ಆಫ್ರಿಕಾ ದೇಶಕ್ಕೆ ತೆರಳಿದ ಸಂದರ್ಭ ಅಲ್ಲಿ ವರ್ಣಭೇದದ ನೋವುಂಡ ಪರಿಣಾಮ ಹೋರಾಟಗಾರನಾಗಿ ಪರಿವರ್ತನೆಗೊಂಡ ನಾಯಕ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲ್ಲೂಕಿನ ಸೀಬಾರದ ಮಾಜಿ ಸಚಿವರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಯಂತ್ಯುತ್ಸವದಲ್ಲಿ ಗಾಂಧಿ, ಲಾಲ್ ಬಹುದ್ಧೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಉನ್ನತ ವ್ಯಾಸಂಗ ಬಳಿಕ ಸ್ವದೇಶಕ್ಕೆ ಆಗಮಿಸಿದ ಗಾಂಧಿ, ಭಾರತವನ್ನು ಆಂಗ್ಲರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ತಮ್ಮ ಬದುಕನ್ನು ಸಮರ್ಪಿಸಿಕೊಂಡ ಮಹಾನ್ ಸಂತ ಎಂದು ಬಣ್ಣಿಸಿದರು.
ಸದಾ ಸೂಟು-ಬೂಟು ಧರಿಸುತ್ತಿದ್ದ ಐಷರಾಮಿ ಜೀವನ ಅಳವಡಿಸಿಕೊಂಡಿದ್ದ ಗಾಂಧಿ, ಸ್ವಾತಂತ್ರ್ಯ ಚಳವಳಿಗಾಗಿ ದೇಶ ಸುತ್ತುವ ಸಂದರ್ಭ ನದಿ ದಡದಲ್ಲಿ ಮಹಿಳೆಯೊಬ್ಬಳು ಅರೆಬಟ್ಟೆಯಲ್ಲಿದ್ದ ದೃಶ್ಯ ಕಂಡು, ಅವರೊಳಗಿದ್ದ ಮಾನವೀಯ ಮನಸ್ಸು ಮರುಗಿತು. ದೇಶದ ಎಲ್ಲೆಡೆಯೂ ಇಂತಹದ್ದೇ ಪರಿಸ್ಥಿತಿ ಇದೆ ಎಂದು ತಿಳಿದು, ಅಂದು ಸೂಟು-ಬೂಟು ಬಿಸಾಕಿ, ತುಂಡುಡುಗೆಯ ಫಕಿರನಾಗಿ ದೇಶ ಸುತ್ತಿ ಆಂಗ್ಲರ ವಿರುದ್ಧ ಶಸ್ತ್ರ ರಹಿತ ಹೋರಾಟ ನಡೆಸಿ ಯಶಸ್ಸು ಕಂಡ ಮಹಾನ್ ನಾಯಕ ಎಂದು ವರ್ಣಿಸಿದರು.
ಉಪ್ಪಿಗೆ ಬ್ರಿಟಿಷರು ತೆರಿಗೆ ವಿಧಿಸಿದ ಸಂದರ್ಭ ಅದನ್ನು ವಿರೋಧಿಸಿ ಉಪ್ಪಿನ ದಂಡಯಾತ್ರೆ ಸೇರಿ ವಿವಿಧ ರೀತಿ ಹೋರಾಟ ನಡೆಸಿದ ಗಾಂಧೀಜಿಯ ಅಹಿಂಸಾ ಮಾರ್ಗ ಪ್ರಸ್ತುತ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬ್ರಿಟಿಷರನ್ನು ತುಂಡು ಬಟ್ಟೆ ತೊಟ್ಟು, ಉಪವಾಸ, ಅಹಿಂಸಾ ಮಾರ್ಗದಲ್ಲಿ ಗೆಲುವು ಕಂಡ ವಿಶ್ವದ ಏಕೈಕ ನಾಯಕ ಗಾಂಧೀಜಿ ಎಂದು ತಿಳಿದರು.
ಸ್ವದೇಶಿ ಉತ್ಪನ್ನ ಬಳಸಿ, ವಿದೇಶದ ವಸ್ತುಗಳನ್ನು ತಿರಸ್ಕರಿ ಎಂಬ ಗಾಂಧಿ ಕರೆ ದೇಶದಲ್ಲಿ ಬಹುದೊಡ್ಡ ಕ್ರಾಂತಿ ಜೊತೆಗೆ ಸ್ವಾಭಿಮಾನದ ಕಿಚ್ಚು ಹಚ್ಚಿತು.
ತಮ್ಮ ದೂರದೃಷ್ಟಿ ಚಿಂತನೆ, ಭಾರತದ ಹಿತದೃಷ್ಟಿಯಿಂದ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸಲಹೆ ಮೆರೆಗೆ ವಿದೇಶಿ ರಾಜನೀತಿ ಪರಿಣಿತ, ವೈಜ್ಞಾನಿಕ ಪರಿಪಾಲಕ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ ಜವಹರಲಾಲ್ ನೆಹರು ಅವರನ್ನು ಪ್ರಥಮ ಪ್ರಧಾನಿಯನ್ನಾಗಿ ಮಾಡುವ ಮೂಲಕ ಮಹಾತ್ಮಗಾಂಧಿ ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ನೀಡಿದರು.
ಅವರ ಆಶಯದಂತೆ ದೇಶವನ್ನು ಕೃಷಿ, ಶಿಕ್ಷಣ, ವಿಜ್ಞಾನ ಕ್ಷೇತ್ರದಲ್ಲಿ ನೆಹರು ಅದ್ವಿತೀಯ ಸಾಧನೆ ಮಾಡಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಬರಿದಾಗಿದ್ದ ಭಾರತವನ್ನು ಮರು ನಿರ್ಮಾಣ ಮಾಡಿದರು ಎಂದರು.
ಗಾಂಧೀಜಿ ಕನಸು, ವಲ್ಲಭಭಾಯಿ ಪಟೇಲ್ ಬಿಗಿ ಆಡಳಿತ, ನೆಹರು, ಶಾಸ್ತ್ರೀಜಿ ಅವರ ದೂರದೃಷ್ಟಿ ಚಿಂತನೆಯ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ ದೇಶಕ್ಕೆ ನೂರಾರು ಕೊಡುಗೆಗಳನ್ನು ತನ್ನ ಆಡಳಿತದ ಅವಧಿಯಲ್ಲಿ ನೀಡಿದೆ. ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ವಲಸೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ, ನೂರಾರು ವಿಶ್ವವಿದ್ಯಾಲಯಗಳು, ಜಲಾಶಯಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿಖ್ಯಾತ ಇಸ್ರೋ ಹೀಗೆ ಅನೇಕ ಸಂಸ್ಥೆಗಳ ಮೂಲಕ ದೇಶವನ್ಮು ಪ್ರಗತಿಪತದತ್ತ ಕೊಂಡೊಯ್ದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಜನರು ಹಸಿವಿನಿಂದ ಇರಬಾರದು ಎಂಬ ಗಾಂಧೀಜಿ, ಶಾಸ್ತ್ರೀಜಿ, ಅಂಬೇಡ್ಕರ್, ಬಸವಣ್ಣನ ಪರಿಕಲ್ಪನೆಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿ ಯೋಜನೆಗಳು ಆಗಿವೆ ಎಂದು ಹೇಳಿದರು.
ಈ ಯೋಜನೆಗಳನ್ನು ವಿರೋಧಿಸುವವರು ಗಾಂಧೀಜಿಯನ್ನು ಕೊಂದ ಗೂಡ್ಸೆ ಸಂತತಿಗಳಾಗಿದ್ದು, ಇವರಿಗೆ ಶಾಸ್ತ್ರಿಜಿ, ಬಸವಣ್ಣ, ಅಂಬೇಡ್ಕರ್ ಕಂಡ ಕನಸಿನ ಭಾರತ ನಿರ್ಮಾಣ ಬೇಕಿಲ್ಲ ಎಂದು ದೂರಿದರು.
ಸಮಾಜದಲ್ಲಿ ಸದಾ ಅಶಾಂತಿ, ಜಾತಿ-ಧರ್ಮಗಳ ಮಧ್ಯೆ ಕಂದಕ ಇರಬೇಕು, ಬಡವರು ಬಡವರಾಗಿ, ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗಬೇಕೆಂಬುದು ಕೆಲ ಪಕ್ಷಗಳ ನೀತಿಯಾಗಿದ್ದರೆ, ಕಾಂಗ್ರೆಸ್ ಪಕ್ಷ ಸಮ ಸಮಾಜ ಕಟ್ಟಲು ಶ್ರಮಿಸುತ್ತಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಗಳಿಸಿ, ೧೩೫ ಮಂದಿ ಶಾಸಕರಾಗಿ ಗೆಲ್ಲಲು ಸಾಧ್ಯವಾಯಿತು ಎಂದರು.
ಈಚೆಗೆ ಗಾಂಧೀಜಿಯನ್ನು ಕೊಂದವರು ಗಾಂಧೀಜಿ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ, ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ನಮ್ಮ ಅಜೆಂಡಾ ಎಂದವರು ಮೇಲ್ನೋಟಕ್ಕೆ ಸಂವಿಧಾನ ಶಿಲ್ಪಿ ಭಾವಚಿತ್ರಕ್ಕೆ ಗೌರವಿಸುವುದು, ಆರ್.ಎಸ್.ಎಸ್. ಸಂಘಟನೆ ನಿಷೇಧಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪಿಸಿದ್ದಾರೆ. ಆದರೆ, ಇದೆಲ್ಲವು ಅವರು ಕೇವಲ ಅಧಿಕಾರ ಹಿಡಿಯಲು ಮಾತ್ರ, ಗದ್ದುಗೆ ಏರಿದ ಬಳಿಕ ಅದಾನಿ, ಅಂಬಾನಿ ಸಾಲಮನ್ನಾ ಮಾಡಿ, ಸಿಲಿಂಡರ್, ಪೆಟ್ರೋಲ್, ಬೇಳೆಕಾಳುಗಳ ಬೆಲೆ ಏರಿಸಿ ಬಡವರ ಹೊಟ್ಟೆಗೆ ಹೊಡೆಯುವುದು ಅವರ ನೀತಿ ಆಗಿದೆ. ಇದನ್ನು ಮರೆಸಲು ದೇಶದ ಜನ ಜಾತಿ-ಧರ್ಮದ ಹೆಸರಿನಲ್ಲಿ ಸದಾ ಜಗಳವಾಡುವಂತೆ ಪ್ರಚೋದಕ ಭಾಷಣ ಮಾಡುತ್ತಾರೆ. ಇಂತಹವರಿಗೆ ಕನ್ನಡಿಗರು ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ್ರೋಹಿಗಳು ಹೇಳ ಹೆಸರಿಲ್ಲದಂತೆ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮದ್ದೇರು ಗ್ರಾಪಂ ಮಾಜಿ ಅಧ್ಯಕ್ಷೆ ಗಂಗಮ್ಮ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಿರಂಜನ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದುರುಗೇಶ್ ಪೂಜಾರಿ, ಮುಖಂಡರಾದ ವಿಜಯಕುಮಾರ್, ಶಿವಣ್ಣ, ಬಸವರಾಜಪ್ಪ, ಕಿರಣ್, ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.