ಕೆಸಿಆರ್ ರಾಷ್ಟ್ರೀಯ ಪಕ್ಷ ಆರಂಭಕ್ಕೂ ಮುನ್ನ ಕೋಳಿ ಮತ್ತು ಮದ್ಯ ವಿತರಣೆ ; ವಿಡಿಯೋ ವೈರಲ್

 

ಹೈದರಾಬಾದ್, (ತೆಲಂಗಾಣ) :  ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಅವರು ತಮ್ಮ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಒಂದು ದಿನ ಮೊದಲು, ನಾಯಕರೊಬ್ಬರು ವಿಸ್ಕಿ ಮತ್ತು ಚಿಕನ್ ಹಂಚುವ ವೀಡಿಯೊ ವೈರಲ್ ಆಗಿದೆ.

ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವಿಡಿಯೋದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ರಾಜನಾಳ ಶ್ರೀಹರಿ ವಾರಂಗಲ್‌ನಲ್ಲಿ ಸ್ಥಳೀಯರಿಗೆ ಮದ್ಯದ ಬಾಟಲಿಗಳು ಮತ್ತು ಕೋಳಿಗಳನ್ನು ಹಂಚುತ್ತಿರುವುದು ಕಾಣಬಹುದು. ಸಾರಿಗೆ ವಾಹನದ ಮೇಲೆ ಕೆಸಿಆರ್‌ ಅವರ ದೊಡ್ಡ ಕಟೌಟ್‌ನೊಂದಿಗೆ, ಉದ್ದನೆಯ ಸರತಿ ಸಾಲಿನಲ್ಲಿ ಜಮಾಯಿಸಿದ ಸ್ಥಳೀಯರಿಗೆ ಹಂಚುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.

2024 ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೆಸಿಆರ್ ಅವರು ತಮ್ಮ ರಾಷ್ಟ್ರೀಯ ಪಕ್ಷವನ್ನು ದಸರಾ ಹಬ್ಬದ ಸಂದರ್ಭದಲ್ಲಿ ಘೋಷಿಸಲು ಸಜ್ಜಾಗಿದ್ದಾರೆ. ರಾಷ್ಟ್ರೀಯ ಪಕ್ಷ ಆರಂಭದ ಮಾರ್ಗಸೂಚಿ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಟಿಆರ್‌ಎಸ್ ಶಾಸಕಾಂಗ ಪಕ್ಷ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆಯು ಬುಧವಾರ ತೆಲಂಗಾಣ ಭವನದಲ್ಲಿ ನಡೆಯಲಿದೆ. ಇದರಲ್ಲಿ ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗುವ ಬಗ್ಗೆ ನಿರ್ಣಯವನ್ನು ಮಂಡಿಸಲಾಗುವುದು. ಇದನ್ನು ಭಾರತೀಯ ರಾಷ್ಟ್ರ ಸಮಿತಿ ಅಥವಾ BRS ಎಂದು ಕರೆಯುವ ಸಾಧ್ಯತೆಯಿದೆ.

ಟಿಆರ್‌ಎಸ್‌ಗೆ ಮರುನಾಮಕರಣ ಮಾಡುವ ನಿರ್ಣಯವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ರಾಜ್ಯ ಮಾನ್ಯತೆ ಪಡೆದ ಪಕ್ಷವಾಗಿರುವ ಟಿಆರ್ ಎಸ್ ಯಾವುದೇ ರಾಜ್ಯದಲ್ಲಿ ಸ್ಪರ್ಧಿಸಬಹುದು.

ಮುಂಬರುವ 2024 ರ ರಾಷ್ಟ್ರೀಯ ಚುನಾವಣೆಯಲ್ಲಿ ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ, ಟಿಆರ್‌ಎಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯಬಹುದು. ಅದಕ್ಕೂ ಮುನ್ನ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶೇ.6ರಷ್ಟು ಮತಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಬಹುದು.

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಬಿಆರ್‌ಎಸ್ ಹೊರಹೊಮ್ಮಲಿದೆ ಮತ್ತು 2024ರಲ್ಲಿ ಈ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ಕೆಸಿಆರ್ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದಾರೆ.

ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸುವ ಸಾಧ್ಯತೆಯಿದೆ.

ಡಿಸೆಂಬರ್ 9 ರಂದು ಕೆಸಿಆರ್ ದೆಹಲಿಯಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲು ಉದ್ದೇಶಿಸಿದ್ದಾರೆ ಎಂದು ವರದಿಯಾಗಿದೆ. ಆಗ BRS ಅನ್ನು ಬೆಂಬಲಿಸುವ ಸಂಘಟನೆಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗುವುದು.

ತೆಲಂಗಾಣ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳ ಒಕ್ಕೂಟವನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಅವರು ಹಲವಾರು ಪ್ರಾದೇಶಿಕ ಪಕ್ಷದ ಆಡಳಿತದ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ ಮತ್ತು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *