ಚಿತ್ರದುರ್ಗ.ಮಾರ್ಚ್.28:ಅಧರ್ಮ, ಅನೀತಿ, ಅರಾಜಕತೆ, ಅತ್ಯಾಚಾರಗಳು ಭೂಮಿಯ ಮೇಲೆ ಹೆಚ್ಚಾದಾಗ ದೇವರು ಅವತಾರ ಎತ್ತಿ, ಇವುಗಳಿಗೆ ಅಂತ್ಯಹಾಡಿ, ಧರ್ಮ ರಕ್ಷಣೆ ಮಾಡುತ್ತಾನೆ ಎಂದು ಹಿಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅಗ್ನಿಬನ್ನಿರಾಯರು ಸಹ ಧರ್ಮ ರಕ್ಷಣೆಗಾಗಿ ಜನ್ಮಿಸಿದವರು ಎಂದು ಉಪವಿಭಾಗಾಧಿಕಾರಿ ಮಹಿಬೂಬ್ ಜಿಲಾನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಚಿತ್ರದುರ್ಗ ನಗರಸಭೆ ಸಹಯೋಗದಲ್ಲಿ, ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಶ್ರೀ ಅಗ್ನಿಬನ್ನಿರಾಯರ ಜಯಂತಿ ಕಾರ್ಯಕ್ರಮದಲ್ಲಿ, ಅಗ್ನಿಬನ್ನಿರಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವೇದಗಳು ಹಾಗೂ 18 ಪುರಾಣಗಳನ್ನು ಓದಿದಾಗ, ನಮಗೆ ದೇವರ ಅವತಾರ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತದೆ. ದೇವಿಪುರಾಣ, ಶಿವಪುರಾಣ, ವಿಷ್ಣುಪುರಾಣಗಳಂತೆ, ಅಗ್ನಿಬನ್ನಿರಾಯ ಪುರಾಣವು ಅತಿ ಮುಖ್ಯವಾಗಿದೆ. ಅರಾಜಕತೆಯನ್ನು ಉಂಟುಮಾಡುವ ರಾಕ್ಷಸರ ವಧೆ ಮಾಡಿ ಅಗ್ನಿಬನ್ನಿರಾಯರು ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಿದರು ಎಂದು ಮಹಿಬೂಬ್ ಜಿಲಾನ್ ಹೇಳಿದರು.
ಉಪನ್ಯಾಸಕ ಜಿ.ಎನ್.ಯಶೋಧರ್ ಮಾತನಾಡಿ, ಅಗ್ನಿವಂಶ ಕ್ಷತ್ರಿಯರ ಕುಲದೈವ ಅಥವಾ ಮೂಲಪುರುಷ ಎಂದು ಅಗ್ನಿಬನ್ನಿರಾಯರನ್ನು ಪೂಜಿಸಲಾಗುತ್ತದೆ. ಶಿವನ ಮೂರನೆ ಕಣ್ಣಿನಿಂದ ಜನಿಸಿದ ಅಗ್ನಿಬನ್ನಿರಾಯರು ಭೂ ಲೋಕದಲ್ಲಿನ ಅರಾಜಕತೆ ಕೊನೆಗಾಣಿಸಿದರು. ಇಂದ್ರನ ಮಗಳು ಮಂತ್ರಮಲೆಯನ್ನು ಮದುವೆಯಾದ ಅಗ್ನಿಬನ್ನಿರಾಯರ ಮುಂದಿನ ಸಂತತಿಯೇ ಅಗ್ನಿವಂಶ ಕ್ಷತ್ರಿಯರಾಗಿದ್ದಾರೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಇವರನ್ನು ತಿಗಳ ಜನಾಂಗದವರು ಎಂದು ಸಹ ಕರೆಯಲಾಗುತ್ತದೆ. ತುಮಕೂರು, ಮಧುಗಿರಿ, ಕೋಲಾರ, ಮುಳಬಾಗಿಲು, ಬೆಂಗಳೂರು ನಗರದಲ್ಲಿ ತಿಗಳರ ಜನಸಂಖ್ಯೆ ಹೆಚ್ಚಾಗಿದೆ. ಬುಡಕಟ್ಟು ಸಂಪ್ರದಾಯಗಳನ್ನು ಹೊಂದಿರುವ ಇವರ ಮೂಲ ತಮಿಳುನಾಡು ಎಂದು ಕೆಲ ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಕೆಲ ವಿದ್ವಾಂಸರು ಇವರು ಕನ್ನಡಿಗರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರು ರಾಜ್ಯದ ಆಡಳಿತ ನಡೆಸುತ್ತಿದ್ದ ಹೈದರಾಲಿಯು, ತಮಿಳುನಾಡಿನಿಂದ ಕೃಷಿ ಹಾಗೂ ತೊಟಗಾರಿಕೆಯಲ್ಲಿ ಅನುಭವ ಹೊಂದಿದ್ದ ತಿಗಳರನ್ನು ಕರೆತಂದು ಬೆಂಗಳೂರಿನಲ್ಲಿ ಲಾಲ್‍ಬಾಗ್ ಉದ್ಯಾನವನ್ನು ನಿರ್ಮಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕರಗ ಉತ್ಸವವು ತಿಗಳರ ಸಾಂಸ್ಕøತಿಕ ವೈವಿದ್ಯತೆಯನ್ನು ತೋರಿಸುತ್ತದೆ. ರಾಜ್ಯದಲ್ಲಿ ತಿಗಳು ಸಮುದಾಯದವರು ಅಭಿವೃದ್ಧಿ ಹೊಂದಿದ್ದು, ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಮಾಜಿ ಶಾಸಕ ಉಮಾಪತಿ ಸೇರಿದಂತೆ ಗಣ್ಯರು ಅಗ್ನಿಬನ್ನಿರಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಲಾವಿದೆ ರಾಜೇಶ್ವರಿ ನೇತೃತ್ವದ ಕಲಾತಂಡ ನಾಡಗೀತೆ ಹಾಗೂ ಗೀತಗಾಯನ ಪ್ರಸ್ತುತ ಪಡಿಸಿದರು. ರಂಗ ನಿರ್ದೇಶಕ ಕೆ.ಪಿ.ಎನ್.ಗಣೇಶಯ್ಯ ನಿರೂಪಿಸಿದರು. ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ಸ್ವಾಗತಿಸಿದರು.
ನಗರಸಭೆ ಸದಸ್ಯ ಭಾಷಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಪೌರಾಯುಕ್ತೆ ಎಂ.ರೇಣುಕಾ, ಜಿಲ್ಲಾಧಿಕಾರಿಗಳ ಕಚೇರಿಯ ಸಿದ್ದೇಶ್, ಜಿ.ಪಂ. ಮಾಜಿ ಸದಸ್ಯ ಪಾಪಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

