ತುಮಕೂರು: ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಇಷ್ಟದ ದೇವರಿಗೆ ಹರಕೆ ತೀರಿಸಿದ್ದಾರೆ. ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ನನಗೆ ಸಹಕಾರ ನೀಡಲಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ಸಿಎಂ ಆಗುವ ಕನಸು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಸಿಎಂ ಹುದ್ದೆಗೆ ಪೈಪೋಟಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಈ ಪೈಪೋಟಿ ಇದೆ. ಆದ್ರೆ ಪಕ್ಷ ಸಂಘಟನೆಗಾಗಿ ಇಬ್ಬರು ಒಂದಾಗಿದ್ದರು. ಈ ಬಗ್ಗೆ ಮಾತನಾಡಿರುವ ಡಿಕೆಶಿ, ಗುರುಪೀಠ ಸಿಕ್ಕಿದ್ದು ನನ್ನ ಪುಣ್ಯ. ಎಷ್ಟೋ ಸಿಎಂ ಬಂದು ಹೋಗಿದ್ದಾರೆ. ಅಜ್ಜಯ್ಯನ ಆಶೀರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುತ್ತೇನೆ ಎಂಬ ನಂಬಿಕೆ ಇದೆ. ಈ ಮಠ ನಂಗೆ ಪುಣ್ಯ ದೈವ ಕ್ಷೇತ್ರ. ನಂಗೆ ಪ್ರತಿಯೊಂದು ಸಂದರ್ಭದಲ್ಲೂ ಅಜ್ಜಯ ಹಾಗೂ ಇಲ್ಲಿನ ಗುರುಗಳು ಮಾರ್ಗದರ್ಶನ ನೀಡಿದ್ದಾರೆ. ಟಿಕೆಟ್ ವಿಚಾರವನ್ನು ಇಲ್ಲಿಯೇ ಚರ್ಚೆ ಮಾಡಿದ್ದು. 134 ಸೀಟು ಕೊಟ್ಟು, ಯಾರ ಹಂಗಿಲ್ಲದೆ ಸರ್ಕಾರ ರಚನೆ ಮಾಡುವಂತೆ ಮಾಡಪ್ಪ ಅಂತ ಬೇಡಿಕೊಂಡಿದ್ದೆ.
2019ರ ಲೋಕಸಭಾ ಚುನಾವಣೆ ಬಳಿಕ ನಾನು ಪಕ್ಷದ ಜವಬ್ದಾರಿ ತೆಗೆದುಕೊಂಡೆ. ಆಗ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ನನ್ನನ್ನು ಮಂತ್ರಿ ಮಾಡದೆ ಇದ್ದಾಗ ತಾಳ್ಮೆ ಇರಲಿಲ್ಲವಾ..? ಅವರಿಗೆ ನಾನು ಸಹಕಾರ ನೀಡಿದ್ದೇನೆ ಎಂದಿದ್ದಾರೆ.