ಸದನದಲ್ಲಿ ಚರ್ಚೆಯಾಗದ ಕಾಡುಗೊಲ್ಲರ ಎಸ್ಟಿ ವಿಷಯ: ಲೋಕಸಭೆ ಚುನಾವಣೆ ಆದ್ಮೇಲೆ ಮೀಸಲಾತಿ – ಮಾಜಿ ಪ್ರಧಾನಿ ಹೇಳಿಕೆ

suddionenews
2 Min Read

ಸುದ್ದಿಒನ್, ಬೆಂಗಳೂರು, ಫೆಬ್ರವರಿ.13 : ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ತಿಳಿಸಿದರು.

ಬೆಂಗಳೂರಿನ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಸೋಮವಾರ
ಹಿರಿಯೂರು, ಚಿತ್ರದುರ್ಗ, ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ, ವಿವಿಧ ಭಾಗಗಳ ಮುಖಂಡರು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಅತ್ಯಂತ ತುಂಬಾ ಹಿಂದುಳಿದಿರುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಕಾಡುಗೊಲ್ಲ ಜನಾಂಗದವರು, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಣ್ಣ ಜನಾಂಗದ ಸ್ಥಿತಿಗತಿಗಳನ್ನು ಅರಿತುಕೊಂಡು ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ,  ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಇವರಿಗೆ ಪತ್ರ ಬರೆದು, ಭೇಟಿ ಮಾಡಿ ಮಾತುಕತೆ ನಡೆಸಿ, ಕೈಮುಗಿದು ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಸಮುದಾಯಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಲಾಯಿತು. ಕೈ ಮುಗಿದು ಕಳಕಳಿಯಿಂದ ಮನವಿ ಮಾಡಿದೆ. ಈ ವಿಷಯ ಚರ್ಚೆ ಆಗಬೇಕಾಯಿತು.

ಆದರೆ ಸದನದಲ್ಲಿ ಕೇಂದ್ರ ಸರ್ಕಾರದ ಸಾಧನೆಯ ಶ್ರೀರಾಮ ಮಂದಿರ ನಿರ್ಮಾಣ, ಸರ್ಕಾರದ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪುಪತ್ರ  ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಎಸ್ಟಿ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಮನವಿಗೆ ಸ್ಪಂದಿಸಿದ ಪ್ರಧಾನಿ ಹಾಗೂ ಗೃಹ ಸಚಿವರು ಕಾಡುಗೊಲ್ಲರಿಗೆ ನ್ಯಾಯ ಒದಗಿಸಲಾಗುವುದೆಂದು ಭರವಸೆ ಕೊಟ್ಟಿದ್ದಾರೆ, ಸಮುದಾಯ ಧೃತಿಗೆಡದಬಾರದು. ಇದಕ್ಕೆ ಕೇಂದ್ರ ಸರ್ಕಾರದ ಸಹಮತ ಇದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಭರವಸೆ ನೀಡಿದರು.

ಲೋಕಸಭಾ ಚುನಾವಣೆ ಮುನ್ನ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಕಾಡುಗೊಲ್ಲರ ಮನೆಯಲ್ಲಿ ಊಟ ಮಾಡಿಕೊಂಡು ಬರುತ್ತೇನೆ. ಚುನಾವಣೆ ಮುಗಿದ ಬಳಿಕ ನಿಮಗೆ ಎಸ್ಟಿ ಭಾಗ್ಯ ದೊರೆಯಲಿದೆ. ಮೇನಲ್ಲಿ ಚುನಾವಣೆ ಮುಗಿದ ನಂತರ ಮತ್ತೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಕೊಟ್ಟ ಮಾತು ತಪ್ಪುವುದಿಲ್ಲ. ನಾನು ಇನ್ನೂ ಎರಡೂವರೆ ವರ್ಷ ಬದುಕೀರುತ್ತೇನೆ. ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇಡಿ ಎಂದು ಪಕ್ಕದಲ್ಲಿ ಕುಳಿತಿದ್ದವರ ಕೈಹಿಡಿದು ಭರವಸೆ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *