ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಸಾವಿರಾರು ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದು ದೇವೇಗೌಡ್ರ ಕುಟುಂಬಕ್ಕೆ ಮುಜುಗರ ಉಂಟು ಮಾಡಿದೆ. ಪ್ರಕತಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಎಸ್ಐಟಿ ಅಧಿಕಾರಿಗಳಿಗೆ ಸರಂಡರ್ ಆಗಿದ್ದೆ ಒಂದು ತಿಂಗಳ ಬಳಿಕ. ಸದ್ಯ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ. ಇದರ ಬೆನ್ನಲ್ಲೇ ರೇವಣ್ಣ ಅವರ ಮತ್ತೊಬ್ಬ ಮಗ ಸೂರಜ್ ರೇವಣ್ಣನದ್ದು ಕೇಸ್ ಒಂದು ಬೆಳಕಿಗೆ ಬಂದಿದೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ಪ್ರಕರಣ ದಾಖಲಾಗಿದೆ.
ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದಯವಿಟ್ಟು ಇಂತಹ ವಿಷಯಗಳನ್ನು ನನ್ನ ಬಳಿ ಕೇಳಬೇಡಿ. ರಾಜ್ಯಕ್ಕೆ ಸಂಬಂಧ ಪಟ್ಟಂತ ವಿಚಾರಗಳು ಏನಾದರೂ ಇದ್ದರೆ ಹೇಳಿ. ಈ ರೀತಿಯ ವಿಚಾರಗಳನ್ನು ನನ್ನ ಹತ್ತಿರ ಯಾಕೆ ಚರ್ಚೆ ಮಾಡುತ್ತೀರ. ಅದರ ಅವಶ್ಯಕತೆ ಏನಿದೆ..? ಅದಕ್ಕೆ ಅಂತ ಕಾನೂನು ಇದೆ. ಅದನ್ನು ಕಾನೂನು ನೋಡಿಕೊಳ್ಳುತ್ತದೆ ಎಂದು ಗರಂ ಆಗಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತನಿಂದಾನೇ ದೂರು ದಾಖಲಾಗಿದೆ. ಒಂದಿನ ತೋಟದ ಮನೆಗೆ ಒಬ್ಬನನ್ನೇ ಕರೆದು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದಾರೆ. ಜೊತೆಗೆ ಎರಡು ಕೋಟಿ ಹಣದ ಆಮಿಷ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸೂರಜ್ ರೇವಣ್ಣ ಕಡೆಯಿಂದ ದೂರು ದಾಖಲಾಗಿದ್ದು, ಐದು ಕೋಟಿಗೆ ಡಿಮ್ಯಾಂಡ್ ಇಟ್ಟು, ಈ ರೀತಿ ಕೇಸು ದಾಖಲಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.