ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಗೃಹಾಲಂಕಾರಿಕ ವಸ್ತುಗಳ ತಯಾರಿಸುವುದನ್ನು ಕಲಿತರೆ ಜೈಲಿನಿಂದ ಬಿಡುಗಡೆಯಾದ ಮೇಲೆ ಸ್ವಾವಲಂಬಿಯಾಗಿ ಬದುಕಲು ನೆರವಾಗಲಿದೆ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ರೊ.ಈ.ಅರುಣ್‍ಕುಮಾರ್ ಖೈದಿಗಳಿಗೆ ಕರೆ ನೀಡಿದರು.
ರೋಟರಿ ಕ್ಲಬ್ ಚಿನ್ಮುಲಾದ್ರಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಎಸ್.ಎಸ್.ಎಸ್.ಘಟಕ ಭರಮಸಾಗರ ಇವುಗಳ ಸಹಯೋಗದೊಂದಿಗೆ ಬಂಧಿಖಾನೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಸದಿಂದ ರಸ ಎನ್ನುವ ಎರಡು ದಿನದ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.
ದಿನನಿತ್ಯವೂ ಮನೆಗಳಲ್ಲಿ ಸಿಗುವ ಅನುಪಯುಕ್ತ ವಸ್ತುಗಳಾದ ತೆಂಗಿನಕಾಯಿ ಚಿಪ್ಪು, ಪ್ಲಾಸ್ಟಿಕ್ ಬಾಟಲ್, ಹ್ಯಾಂಡ್ ಕವರ್ ಇವುಗಳನ್ನು ಬಳಸಿಕೊಂಡು ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದನ್ನು ಕಲಿತರೆ ಮನೆಯಲ್ಲಿ ಕುಳಿತು ಸಂಪಾದಿಸಿ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಕಾರಾಗೃಹದ ಅಧೀಕ್ಷಕಿ ಮಹದೇವಿ ಮಾತನಾಡುತ್ತ ರೋಟರಿ ಕ್ಲಬ್ ಚಿನ್ಮುಲಾದ್ರಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಇವುಗಳು ಮೊದಲಿನಿಂದಲೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿವೆ. ಸಿಟ್ಟಿನ ಕೈಗೆ ಬುದ್ದಿಕೊಟ್ಟಾಗ ಕೆಲವೊಮ್ಮೆ ಅಪರಾಧವೆಸಗಿ ಸೆರೆವಾಸ ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡು ಜೈಲಿನಿಂದ ಹೊರ ಹೋದ ಮೇಲೆ ಸಮಾಜದಲ್ಲಿ ಎಲ್ಲರಂತೆ ಬಾಳಿ ಎಂದು ಖೈದಿಗಳಿಗೆ ಹೇಳಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸದಸ್ಯ ಮಧುಪ್ರಸಾದ್, ಜಿಲ್ಲಾ ಶಾಖೆ ಕಾರ್ಯದರ್ಶಿ ಮಜಹರ್‍ವುಲ್ಲಾ, ರೋಟರಿ ಕ್ಲಬ್ ಚಿನ್ಮುಲಾದ್ರಿ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ಸದಸ್ಯ ಗುರುಮೂರ್ತಿ ಇವರುಗಳು ವೇದಿಕೆಯಲ್ಲಿದ್ದರು.