ಕೃಷಿ ಅಭಿವೃದ್ಧಿಗೆ ಕೋಲಾರ ಜಿಲ್ಲೆಯ ಮಾದರಿ ಅಳವಡಿಕೆ : ಸಚಿವ ಬಿ.ಸಿ.ಪಾಟೀಲ್

suddionenews
1 Min Read

ಚಿತ್ರದುರ್ಗ, (ಏ.18) : ಕೃಷಿ ಅಭಿವೃದ್ಧಿಗೆ ಕೋಲಾರ ಜಿಲ್ಲೆಯ ಮಾದರಿ ಅಳವಡಿಕೆ ಉತ್ತಮ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹೊಳಲ್ಕೆರೆ ಪಟ್ಟಣದಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇಸ್ರೇಲ್ ಮಾದರಿಗಿಂತ ರಾಜ್ಯದ ಕೋಲಾರ ಜಿಲ್ಲೆಯ‌ ರೈತರು ಅಳವಡಿಸಿಕೊಂಡ ಕೃಷಿ ಪದ್ದತಿ ಉತ್ತಮವಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ 2015 ರಲ್ಲಿ 95 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿವೆ.

ಆದರೆ ಇದೇ ಸಮಯದಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ. ಇದಕ್ಕೆ ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ಮಾದರಿ ಅಳವಡಿಸಿಕೊಂಡಿರುದು ಕಾರಣವಾಗಿದೆ.

ತರಕಾರಿ, ರಾಗಿ, ಜೋಳ ಸೇರಿದಂತೆ ಮಣ್ಣಿನಿಗೆ ತಕ್ಕ ಬೆಳೆ ಬೆಳೆಯುತ್ತಾರೆ. ಕೃಷಿಯೊಂದಿಗೆ ಹೈನುಗಾರಿಕೆ ಕೋಳಿ, ಕುರಿ, ಜೇನು ಸಾಗಾಣಿಕೆ ಅಂತಹ ಉಪಕಸುಬುಗಳನ್ನು ರೈತರು ಕೈಗೊಳ್ಳಬೇಕು. ಶಿರಸಿ ತಾಲೂಕಿನ ಮಾದರಿ ರೈತ ಜೇನು ಸಾಗಾಣಿಕೆಯಿಂದ ವರ್ಷಕ್ಕೆ 2.5 ಕೋಟಿ ರೂಪಾಯಿ ಲಾಭಗಳಿಸುತ್ತಿದ್ದಾರೆ.

ಎಲ್ಲಾ ವಿಧಧ ಜೇನುಗಳನ್ನು ಸಾಕಿ, ಜೇನುತುಪ್ಪ ಸಂಸ್ಕರಿಸಿ ಮಾರಾಟ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲಿನ ರೈತ ನಾಗರಾಜ ಸ್ವಲ್ಪ ಜಮೀನಿನಲ್ಲಿ ಕುರಿ ಸಾಕಾಗಣೆ ಮಾಡಿ ವಾರ್ಷಿಕವಾಗಿ 16 ಲಕ್ಷ ರೂಪಾಯಿಗಳ ಆದಾಯಗಳಿಸುತ್ತಿದ್ದಾರೆ. ಇವರ ಮಾದರಿಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಇಚ್ಛೆಯಿಂದ ಕೃಷಿ ಸಚಿವನಾಗಿದ್ದೇನೆ‌. ಕೃಷಿ ಇಲಾಖೆ ಮುಳ್ಳಿನ ಹಾಸಿಗೆ. ರಾಜ್ಯದ ರೈತರು ಸದಾಕಾಲ ಸಂಕಷ್ಟದಿಂದ ಇದ್ದಾರೆ. ರೈತರ ಜೀವನದಲ್ಲಿ ಬದಲಾವಣೆ ತರಲು ವೈಜ್ಞಾನಿಕ ಹಾಗೂ ಸಮಗ್ರ ಕೃಷಿಗೆ ಒತ್ತು ನೀಡಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *