ಚಿಕ್ಕಬಳ್ಳಾಪುರ: ಜಿಲ್ಲೆಯ ಆವಲಗುರ್ಕಿ ಬಳಿ ಆದಿಯೋಗಿ ಶಿವನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈ ಮೂರ್ತಿ ನಿರ್ಮಾಣಕ್ಕೆ ಸರ್ಕಾರದಿಂದ ಕೂಡ ಹಣ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದ್ರೆ ಇದೀಗ ಈ ವಿಚಾರವಾಗಿ ಇಶಾ ಫೌಂಡೇಶನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೂರ್ತಿ ನಿರ್ಮಾಣಕ್ಕೆ ಯಾವುದೇ ರೀತಿಯಿಂದಾನೂ ಸರ್ಕಾರದಿಂದ ಸಹಾಯ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಅರಣ್ಯ ಇಲಾಖೆಯ ಮಣ್ಣು ಸಂರಕ್ಷನೆಗೆ ಒತ್ತು ನೀಡಿರುವ ಸರ್ಕಾರ, ಅದಕ್ಕೆಂದು ನೂರು ಕೋಟಿ ಅನುದಾನ ನೀಡಿದೆ. ಈ ಹಣ ಬಿಡುಗಡೆ ಮಾಡಿರುವುದು ರಾಜ್ಯ ಪರಿಸರ ಸಂರಕ್ಷಣೆಗಾಗಿ. ಆದರೆ ಈಶಾ ಫೌಂಡೇಶನ್ ಅಥವಾ ಸದ್ಗುರುಗಳು ಈಗಿನ ಸರ್ಕಾರದಿಂದ ಅಥವಾ ಹಿಂದಿನ ಸರ್ಕಾರದಿಂದ ಯಾವುದೇ ರೀತಿಯ ಹಣ ಪಡೆದಿಲ್ಲ. ಇಶಾ ಫೌಂಡೇಶನ್ ಸರ್ಕಾರದ ಜೊತೆಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಆದಿಯೋಗಿ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ತೆಗೆದುಕೊಂಡ ಜಮೀನಿನ ಬಗ್ಗೆಯೂ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಅದಕ್ಕೂ ಸ್ಪಷ್ಟನೆ ನೀಡಿರುವ ಇಶಾ ಫೌಂಡೇಶನ್, ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ಎಲ್ಲಾ ಜಮೀನನ್ನು ಮೂಲ ಮಾಲೀಕರಿಂದ ಹಣ ಕೊಟ್ಟು, ಅಧಿಕೃತವಾಗಿಯೇ, ಕಾನೂನಾತ್ಮಕವಾಗಿ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.