ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರಿಗೆ ಆರೋಗ್ಯ ಸರಿ ಇಲ್ಲ. ಆದರೂ ಸೋಲದೇವನಹಳ್ಳಿಯಿಂದ ಸದಾಶಿವನಗರದ ತನಕ ಬಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು. ಅಮ್ಮನ ಜೊತೆಗೆ ನಟ ವಿನೋದ್ ರಾಜ್ ಕೂಡ ಬಂದಿದ್ದರು.
ಹಿರಿಯ ನಟಿ ಲೀಲಾವತಿ ಅವರಿಗೆ ಪ್ರಾಣಿ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಅವರ ತೋಟದಲ್ಲೂ ಪ್ರಾಣಿಗಳೇ ಹೆಚ್ಚಾಗಿವೆ. ಹಲವು ತಳಿಯ ನಾಯಿಗಳಂತು ಸಿಕ್ಕಾಪಟ್ಟೆ ಇದಾವೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಿಸಿರುವ ಲೀಲಾವತಿ ಅವರು, ಇದೀಗ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಿಸಿದ್ದಾರೆ. ಅದರ ಉದ್ಘಾಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಲು ಬಂದಿದ್ದರು.
ಭೇಟಿ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಪ್ರಾಣಿಗಳ ರಕ್ಷಣೆ ಈ ತಾಯಿ ಮಗನ ಹವ್ಯಾಸ. ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ದಿನಾಂಕ ನೀಡಿ ಎಂದು ಕೇಳಿದ್ದಾರೆ. ನಾನು ಸಮಯ ನೋಡಿಕೊಂಡು ಹೇಳುತ್ತೇನೆ. ಹಿರಿಯವರಾದ ಲೀಲಾವತಿಯವರನ್ನು ಕರೆದುಕೊಂಡು ಬರುವುದು ಬೇಡ ಎಂದು ನಾನು ಹೇಳಿದ್ದೆ. ಆದರೂ ಅವರು ಇಲ್ಲಿಗೆ ನನ್ನ ಮೇಲೆ ಅಭಿಮಾನವಿಟ್ಟು ಬಂದಿದ್ದಾರೆ. ಅವರಿಗೆ ಉತ್ತಮವಾದ ಆರೋಗ್ಯ ಸಿಗಲಿ ಎಂದಿದ್ದಾರೆ.
ಇನ್ನು ಲೀಲಾವತಿಯವರು ಅನಾರೋಗ್ಯದ ಕಾರಣ ಕಾರಿನಲ್ಲಿಯೇ ಕುಳಿತಿದ್ದರು. ಡಿಕೆ ಶಿವಕುಮಾರ್ ಅವರು ಕಾರಿನ ಬಳಿ ಹೋಗಿ ಮಾತನಾಡಿಸಿದ್ದಾರೆ. ಆರೋಗ್ಯ ವಿಚಾರಿಸಿದ್ದಾರೆ. ಸೋಲದೇವನಹಳ್ಳಿಯಲ್ಲಿ ನಿಗದಿಯಾಗಿರುವ ಜಮೀನಿನ ನೋಂದಣಿ ಬಗ್ಗೆಯೂ ಮನವಿ ಮಾಡಿದ್ದಾರೆ. ಆ ಸಂಬಂಧ ಆದಷ್ಟು ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.