ಚಿತ್ರದುರ್ಗ, (ಮೇ 6): ಸುದೀಪ್ ಕನ್ನಡ ನಾಡಿನ ಅದ್ಭುತ ನಟ. ಅವರು ಯಾವುದೇ ಪಕ್ಷ, ವ್ಯಕ್ತಿ ಪರ ಪ್ರಚಾರ ಮಾಡಲು ಸ್ವತಂತ್ರರು. ಆದರೆ, ಭ್ರಷ್ಟ, ಶಾಸಕ, ವಾಲ್ಮಿಕಿ ಸಮುದಾಯದ ವಿರೋಧಿ ಎಂ.ಚಂದ್ರಪ್ಪ ಪರ ಹೊಳಲ್ಕೆರೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದು ಸಮುದಾಯ ಹಾಗೂ ನಮ್ಮಂತ ಅಭಿಮಾನಿಗಳಲ್ಲಿ ನೋವು ತರಿಸಲಿದೆ ಎಂದು ನಾಯಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಚ್ಚ ಚಿತ್ರದ ಮೂಲಕ ಕಿಚ್ಚ ಸುದೀಪ್ ಎಂಬ ಹೆಸರಲ್ಲಿ ಕನ್ನಡ ನಾಡಿನ ಮನ ಗೆದ್ದಿದ್ದಾರೆ. ಈ ಚಿತ್ರ ನಿರ್ಮಾಪಕ ಯಜಮಾನ ರೆಹಮಾನ್ ಚಿತ್ರದುರ್ಗದವರು. ಸುದೀಪ್ ಚಲನಚಿತ್ರ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಲು ಚಿತ್ರದುರ್ಗ ಜಿಲ್ಲೆಯ ಕೊಡುಗೆ ಅಪಾರ ಇದೆ. ಅವರ ಯಾವುದೇ ಚಿತ್ರಗಳು ಬಿಡುಗಡೆಗೊಂಡರೇ ನಾವು ಸಂಭ್ರಮಿಸುತ್ತೇವೆ ಎಂದರು.
ಆದರೆ, ನಾವು ಅಭಿಮಾನಿಸುವ ನಟ ಸುದೀಪ್ ಅವರು, ಭ್ರಷ್ಟ, ಅಶ್ಲೀಲ ಭಾಷೆ ಮೂಲಕ ಜನರನ್ನು ನಿಂದಿಸುವ ಚಂದ್ರಪ್ಪನ ಪರ ಪ್ರಚಾರ ನಡೆಸುವುದು ಬೇಸರ ತರಿಸಿದೆ ಎಂದು ಹೇಳಿದರು.
ವಾಲ್ಮೀಕಿ ಸ್ವಾಮೀಜಿ ತಿಂಗಳುಗಟ್ಟಲೇ ಬೆಂಗಳೂರಿನಲ್ಲಿ ಧರಣಿ ಕುಳಿತಿದ್ದ ಸಂದರ್ಭ ವ್ಯಂಗ್ಯ ಮಾಡಿಕೊಂಡು ಓಡಾಡುತ್ತಿದ್ದ ಚಂದ್ರಪ್ಪ, ಇದೇ ರೀತಿ ಜಿಲ್ಲೆಯಲ್ಲಿ ಅನೇಕ ಮಠಾಧೀಶರ ವಿರುದ್ಧ ಅಸಂಬದ್ಧ, ಅಗೌರವವಾಗಿ ಮಾತನಾಡುವುದು ರೂಢಿ ಮಾಡಿಕೊಂಡಿದ್ದಾರೆ. ಹಲವು ಮಠಾಧೀಶರನ್ನು ಎಣ್ಣೆ ನಿಶದಲ್ಲಿ ಮಾತನಾಡಿದ್ದಾರೆ. ಈಗಲೂ ಕೂಡ ಆ ಸ್ವಾಮೀಜಿ ಹಿಂದೆ ಒಂದು ವೊಟು ಇಲ್ಲ ಎಂದು ಕೆಲ ಮಠಾಧೀಶರ ವಿರುದ್ಧ ಚಂದ್ರಪ್ಪ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಇಲ್ಲಿ ಸ್ವಾಮೀಜಿಗಳ ಹೆಸರು ಹೇಳಿ ಗುರುಗಳು ಮತ್ತು ಭಕ್ತರ ಮನಸ್ಸಿಗೆ ನೋವುಂಟು ಮಾಡಲು ನಾವು ಸಿದ್ಧರಿಲ್ಲ. ಆದರೆ, ಈಗಾಗಲೇ ಚಂದ್ರಪ್ಪನ ಅಹಂಕಾರ, ಧರ್ಮಗುರುಗಳ ಕುರಿತು ಅವರ ದುರ್ವರ್ತನೆ ಹಾಗೂ ಭ್ರಷ್ಟಚಾರ ಕುರಿತು ಜನ ಆಕ್ರೋಶಗೊಂಡಿದ್ದಾರೆ. ಸೋಲಿನ ಭೀತಿಗೆ ಹೆದರಿರುವ ಚಂದ್ರಪ್ಪ, ಸುದೀಪ್ ಜನಪ್ರೀಯತೆ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಟ ಸುದೀಪ್ ಇಂತಹ ಭ್ರಷ್ಟನಿಗೆ ತಮ್ಮ ಹೆಸರನ್ನು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂಬುದು ಅಭಿಮಾನಿಗಳಾದ ನಮ್ಮ ಒತ್ತಾಯ ಎಂದರು.
ಸೂಕ್ಷ್ಮ ಮನಸ್ಸಿನ ಪ್ರಬುದ್ಧ ನಟ ಎಂದೇ ನಮ್ಮೆಲ್ಲರ ಪ್ರೀತಿ ಗಳಿಸಿರುವ ನಟ ಸುದೀಪ್ ಅವರು ಮಠಾಧೀಶರ ವಿರೋಧಿ, ಭ್ರಷ್ಟಚಾರಿ, ಅಹಂಕಾರಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪರ ಪ್ರಚಾರಕ್ಕೆ ಬರುವುದು ಧರ್ಮಗುರುಗಳು ಹಾಗೂ ವಾಲ್ಮಿಕಿ ಸಮುದಾಯಕ್ಕೆ ಬಹಳ ನೋವುಂಟ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಎಚ್.ಆಂಜನೇಯ ಸಚಿವರಾಗಿದ್ದ ಸಂದರ್ಭ ಸಾವಿರಾರು ಕೊಳವೆಬಾವಿಗಳನ್ನು ಎಲ್ಲ ಸಮುದಾಯದ ಬಡವರಿಗೆ ಕೊರೆಯಿಸಿಕೊಟ್ಟಿದ್ದರು. ಜೊತೆಗೆ ಕೊನೆಯ ವೇಳೆಯೂ ಮಂಜೂರು ಮಾಡಿದ್ದರು. ಆದರೆ, ಚಂದ್ರಪ್ಪ ಗೆದ್ದ ಬಳಿಕ ಕೊಳವೆಬಾವಿ, ಮನೆಗಳ ಮಂಜೂರು ಪಟ್ಟಿ ರದ್ದು ಮಾಡಿ ವಾಲ್ಮೀಕಿ ಸೇರಿ ವಿವಿಧ ಸಮುದಾಯದ ಬಡ ಜನರಿಗೆ ಸಮಸ್ಯೆ ಮಾಡಿದರು. ಹೋರಾಟ ನಡೆಸಿ, ಸಿರಿಗೆರೆ ಮಠಕ್ಕೆ ಮೊರೆ ಹೋದ ಸಂದರ್ಭದಲ್ಲೂ ಶಾಸಕ ಚಂದ್ರಪ್ಪ ತಮ್ಮ ದುರ್ವರ್ತನೆ ಕೈಬಿಡಲಿಲ್ಲ ಎಂದು ದೂರಿದರು.
ಇದೇ ರೀತಿ ವೀರಶೈವ ಲಿಂಗಾಯತ, ದಲಿತ ಎಲ್ಲ ವರ್ಗದ ಜನರಿಗೂ ಹಿಂಸೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯದ ವ್ಯಕ್ತಿಯ ತಲೆಗೆ ಇಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಯ ರಕ್ಷಣೆಗೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಜಾತಿ-ಧರ್ಮದ ಮಧ್ಯೆ ಗಲಭೆ ಹುಟ್ಟಿಹಾಕಿ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿರುವ ಚಂದ್ರಪ್ಪನ ಪರ ಪ್ರಚಾರ ನಡೆಸುವುದು ಭ್ರಷ್ಟಾಚಾರ ಶಾಸಕನ ಅಹಂಕಾರಕ್ಕೆ ನೀರು ಹಾಕಿ ಪೋಷಿಸಿದಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ನಮ್ಮ ನೆಚ್ಚಿನ ನಟನಲ್ಲಿ ನಮ್ಮ ಮನವಿ ನಮ್ಮ ವಾಲ್ಮಿಕಿ ಸೇರಿ ಬಹಳಷ್ಡು ಸಮುದಾಯಗಳ ವಿರೋಧಿ, ಭ್ರಷ್ಟ, ಅಹಂಕಾರಿ ಶಾಸಕ ಚಂದ್ರಪ್ಪನ ಪರ ಪ್ರಚಾರ ನಡೆಸದಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಇದರ ಹೊರತುಪಡಿಸಿ ಅವರು ಪ್ರಚಾರ ನಡೆಸಿದರೆ ವಾಲ್ಮೀಕಿ ಸಮುದಾಯಕ್ಕೆ ಹಾಗೂ ಧರ್ಮಗುರುಗಳಿಗೆ ನೋವುಂಟು ಮಾಡಿದಂತೆ. ಏನೇ ನಿರ್ಧಾರವನ್ನು ಸುದೀಪ್ ಕೈಗೊಳ್ಳಲಿ, ಅವರು ಸ್ವತಂತ್ರರು. ಆದರೆ, ನಾವು ಅವರ ಅಭಿಮಾನಿಗಳು. ನಮ್ಮಲ್ಲೂ ನಮ್ಮ ನೆಚ್ಚಿನ ಕಿಚ್ಚನಲ್ಲಿರುವಂತೆ ಕಿಚ್ಚು ಹೆಚ್ಚು ಇದೆ. ಧರ್ಮಗುರುಗಳ ವಿರುದ್ಧ ಎಣ್ಣೆ ನಿಶದಲ್ಲಿ ಕೆಟ್ಟದಾಗಿ ಮಾತನಾಡುವ, ಸಮುದಾಯಕ್ಕೆ ದೊರೆತಿದ್ದ ಸೌಲಭ್ಯಗಳನ್ನು ರದ್ದು ಮಾಡಿ ಅನ್ಯಾಯ ಮಾಡಿದ ಚಂದ್ರಪ್ಪನನ್ನು ಸೋಲಿಸಿಯೇ ತೀರುತ್ತೇವೆ ಎಂದು ಸುದೀಪ್ ಅಭಿಮಾನಿಗಳಾಗಿ ಶಪಥ ಮಾಡುತ್ತೇವೆ ಎಂದು ಹೇಳಿದರು.
ಸಮಾಜದ ರಾಜ್ಯ ಮುಖಂಡ ಟಿ.ಶರಣಪ್ಪ ಮಾತನಾಡಿ. ಎಲ್ಲ ಸಮುದಾಯದವರು ಎಲ್ಲ ಪಕ್ಷದಲ್ಲಿ ಇರುತ್ತಾರೆ. ಚುನಾವಣೆ ಬಳಿಕ ಅದನ್ನು ಮರೆತು ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕು. ಆದರೆ, ಚಂದ್ರಪ್ಪ ಗೆದ್ದ ನಂತರ ಮಂಜೂರಾಗಿದ್ದ ಕೊಳವೆಬಾವಿಗಳ ಸೌಲಭ್ಯ ದೊರೆಯದಂತೆ ಮಾಡಿದರು ಎಂದು ದೂರಿದರು.
ನಟ ಸುದೀಪ್ ಅವರು ಪ್ರಚಾರ ನಡೆಸುವ ಕುರಿತು ನಮ್ಮ ವಿರೋಧ ಇಲ್ಲ. ಆದರೆ, ಜಾತಿ ತಾರತಮ್ಯ ಮಾಡುವ, ಮಠಾಧೀಶರ ಕುರಿತು ಅಸಡ್ಡೆಯಾಗಿ ಮಾತನಾಡುವ ಚಂದ್ರಪ್ಪನ ಪರ ಪ್ರಚಾರಕ್ಕೆ ಬರುವುದು ಅಭಿಮಾನಿಗಳಾದ ನಮ್ಮಲ್ಲಿ ನೋವುಂಟು ಮಾಡಲಿದೆ. ನಮ್ಮ ಮನಸ್ಸಿನ ಭಾವನೆ, ನೋವನ್ನು ನಮ್ಮ ಪ್ರೀತಿಯ ನಟ ಸುದೀಪ್ ಅರಿತು, ಅಭಿಮಾನಿಗಳ ಭಾವನೆಯನ್ನು ಗೌರವಿಸುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ನಾಗಪ್ಪ, ಬೈಯಣ್ಣ ಎಂ.ಪಿ.ಮಧುಪಾಲೇಗೌಡ, ಎಂ.ಪ್ರಕಾಶ್, ಬ್ಯಾಲಹಾಳ್, ಶಿವನಕೆರೆ ತಿಪ್ಪೇಶ್‍ಗೌಡ ಇದ್ದರು.