ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲೂಟದಿಂದ ಸೊರಗಿ ಹೋಗಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತಿದೆ. ಹೀಗಾಗಿಯೇ ದರ್ಶನ್ ಅವರಿಗೆ ಮನೆ ಊಟ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ಪುರಸ್ಕಾರ ಮಾಡಲಿಲ್ಲ. ಇತ್ತಿಚೆಗಷ್ಟೇ ಮನೆ ಊಟದ ಅರ್ಜಿಯನ್ನು ವಾಪಾಸ್ ಪಡೆದಿರುವ ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಇನ್ನು ದರ್ಶನ್ ಮನೆ ಊಟಕ್ಕಾಗಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ದೇಹಾರೋಗ್ಯಕ್ಕಾಗಿ ಮನವಿ ಮಾಡಿದ್ದಾರೆ. ‘ಈ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ಬಂಧಿ ಸಂಖ್ಯೆ 6106, ದರ್ಶನ್ ಎಸ್ ಆದ ನಾನು, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿದ್ದೇನೆ. ಕಳೆದ ಮೂರು ತಿಂಗಳ ಹಿಂದೆ ಮೂಳೆ ಸಂಬಂಧಿತ ಶಸ್ತ್ರ ಚಿಕಿತ್ಸೆಯಾಗಿದೆ. ಹಾಗೂ ದಿನನಿತ್ಯ ಕೆಲಸದ ನಿಮಿತ್ತ ಕಸರತ್ತು ನಡೆಸುತ್ತಿದ್ದೆ. ನನ್ನ ದೇಹಕ್ಕೆ ಪ್ರೋಟೀನ್, ಡಯೆಟ್ ಅವಶ್ಯಕತೆ ಇರುತ್ತದೆ.
ಕೇಂದ್ರ ಕಾರಾಗೃಹಕ್ಕೆ ದಾಖಲಾದ ದಿನದಿಂದ ನಾನು ಕಾರಾಗೃಹದಲ್ಲಿ ನೀಡಿದ ಆಹಾರ ಸೇವಿಸುತ್ತಿದ್ದು, ನನ್ನ ಆರೋಗ್ಯ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನನ್ನ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಕಾರಾಗೃಹದಲ್ಲಿ ದೊರೆಯುವ ಆಹಾರದ ಜೊತೆಗೆ ಮಾನ್ಯರಲ್ಲಿ ಮನವಿ ಇರುವ ಆಹಾರವನ್ನು ನೀಡಬೇಕಾಗಿ ವಿನಂತಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದರ್ಶನ್ ಅವರಿಗೆ ಮನೆ ಊಟ, ಹಾಸಿಗೆ, ಪುಸ್ತಕ ನೀಡುವಂತೆ ಮನವಿ ಮಾಡಿದ್ದರು. ಉಳಿದ ಕೈದಿಗಳು ಅದೇ ರೀತಿ ಡಿಮ್ಯಾಂಡ್ ಇಟ್ಟರೆ ಏನು ಮಾಡಬೇಕು. ಜೈಲಿನಲ್ಲಿ ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತಿದೆ ಎಂದು ಕೋರ್ಟ್ ಅರ್ಜಿ ತಿರಸ್ಕಾರ ಮಾಡಿತ್ತು.