ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.14): ಎಲ್ಲಿಂದಲೋ ಬಂದು ಇಲ್ಲಿ ಚುನಾವಣೆಯಲ್ಲಿ ಗೆದ್ದುಕೊಂಡು ಹೋಗುವುದಾದರೆ ನಮ್ಮ ಪಕ್ಷಕ್ಕೆ ಅದಕ್ಕಿಂತ ಅವಮಾನ ಮತ್ತೊಂದಿಲ್ಲ. ಹಾಗಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಕಾರ್ಯಕರ್ತರು ಶತಗತಾಯ ಶ್ರಮಿಸಬೇಕು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಾಕೀತು ಮಾಡಿದರು.
ಡಿ.10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನ.18 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಜನಸ್ವರಾಜ್ ಸಮಾವೇಶದ ಅಂಗವಾಗಿ ಹೊಳಲ್ಕೆರೆ ಪಟ್ಟಣದ ಬಿಜೆಪಿ.ಕಚೇರಿಯಲ್ಲಿ ಭಾನುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪಕ್ಷ ಕಷ್ಟದಲ್ಲಿದ್ದಾಗ ಬಂದು ವಿಧಾನಪರಿಷತ್ ಚುನಾವಣೆಗೆ ನಿಂತ ಕೆ.ಎಸ್.ನವೀನ್ ಸಾಕಷ್ಟು ನೋವು ಅನುಭವಿಸಿದ್ದಾರೆ. ಅಂತಹ ಘಟನೆ ಮತ್ತೆ ಈ ಚುನಾವಣೆಯಲ್ಲಿ ಮರುಕಳಿಸಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಸೋಲಬಾರದು. ಕಳೆದ ಚುನಾವಣೆಯಲ್ಲಿ ಕೆ.ಎಸ್.ನವೀನ್ ಸೋತಿರುವುದು ಎಲ್ಲರಿಗೂ ನೋವುಂಟು ಮಾಡಿದೆ. ಅದಕ್ಕಾಗಿ ವಿಧಾನಪರಿಷತ್‍ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನಾಯಕರು ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಕಾರ್ಯಕರ್ತರು ಶ್ರಮಿಸಬೇಕು. ಈ ದಿಕ್ಕಿನಲ್ಲಿ ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸದಸ್ಯರುಗಳ ಮನವೊಲಿಸಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಿದೆ. ಒಂದು ವೇಳೆ ಸೋತರೆ ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಈಗಿನಿಂದಲೆ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮ ಪಂಚಾಯಿತಿಗೆ ಅನೇಕ ಉಪಯುಕ್ತ ಯೋಜನೆಗಳನ್ನು ನೀಡಿದೆ. ಮುಂದಿನ ದಿನಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದು, ನಿವೇಶನ ವಿತರಣೆ. ಹಳ್ಳಿಗಳಲ್ಲಿ ಪ್ರತಿ ಮನೆಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ, ಗ್ರಾಮ ಪಂಚಾಯಿತಿಗಳಲ್ಲೇ ಕೆ.ಡಿ.ಪಿ.ಸಭೆಯ ಮಾದರಿಯಲ್ಲಿ ಸಭೆ ಕರೆಯುವ ಅಧಿಕಾರ ನೀಡಲಿದೆ. ಇವೆಲ್ಲಾ ದೃಷ್ಟಿಯಿಂದ ಕಾರ್ಯಕರ್ತರು ಪಕ್ಷದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಸದಸ್ಯರುಗಳ ಮನವೊಲಿಸಿ ಎಂದು ಹೇಳಿದರು.
ಎಂಟು ಮಂದಿ ಶಾಸಕರು, ಒಬ್ಬರು ಕೇಂದ್ರ ಮಂತ್ರಿ, ದಾವಣಗೆರೆಯ ಸಂಸದರು ಇಷ್ಟೆಲ್ಲಾ ಇಟ್ಟುಕೊಂಡು ಯಾವುದೇ ಕಾರಣಕ್ಕೂ ನಮ್ಮ ಪಕ್ಷದ ಅಭ್ಯರ್ಥಿ ಸೋಲಬಾರದು. ವಿಧಾನಸಭೆಯಲ್ಲಿ ಪಾಸ್ ಮಾಡಿದ ಬಿಲ್ ವಿಧಾನಪರಿಷತ್‍ನಲ್ಲೂ ಪಾಸ್ ಆಗಬೇಕಾದರೆ ಅಲ್ಲಿಯೂ ಬಹುಮತವಿರಬೇಕು. ಅದಕ್ಕಾಗಿ ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಚುನಾವಣೆ ಎಂದರೆ ಪರೀಕ್ಷೆಯಂತೆ ಭಯಪಡಬಾರದು. ಸುಗ್ಗಿಯ ಹಬ್ಬದ ರೀತಿಯಲ್ಲಿ ಚುನಾವಣೆಯನ್ನು ತೆಗೆದುಕೊಂಡಾಗ ಮಾತ್ರ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ನೇತೃತ್ವದ ತಂಡ ನ.18 ರಂದು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅಂದು ನಡೆಯುವ ಜನಸ್ವರಾಜ್ ಸಮಾವೇಶದಲ್ಲಿ ಹೆಚ್ಚು ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ, ಪುರುಸಭೆ ಸದಸ್ಯರುಗಳನ್ನು ಕರೆತರುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾದುದು. ನಮ್ಮ ಪಕ್ಷದ ರಾಜಕಾರಣಿಗಳು ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗೆ ಮುಟ್ಟಿಸಿ ಬಿಜೆಪಿ.ಮತಗಳಾಗಿ ಪರಿವರ್ತಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಒಂದು ಗ್ರಾಮ ಪಂಚಾಯಿತಿ ಮೂವರ ತಂಡ ನೇಮಕ ಮಾಡಿದ್ದು, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ, ಇಬ್ಬರು ಹಿರಿಯ ಕಾರ್ಯಕರ್ತರಿರುತ್ತಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ನೂರಾರು ಯೋಜನೆಗಳನ್ನು ತಿಳಿಸಿ ಧೈರ್ಯವಾಗಿ ಅಭ್ಯರ್ಥಿಗೆ ಮತ ನೀಡುವಂತೆ ಕೇಳಿ. ಎರಡು ಬಾರಿ ಎಂ.ಎಲ್.ಸಿ.ಚುನಾವಣೆಯಲ್ಲಿ ಸೋತಿದ್ದೇವೆ. ಹಾಗಾಗಿ ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸದಸ್ಯರು ಹಾಗೂ ಬೇರೆ ಬೇರೆ ಪಕ್ಷದ ಸದಸ್ಯರುಗಳ ಮತಗಳನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆ ನಿಮ್ಮದಾಗಬೇಕೆಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಷೇತ್ರದ ಉಸ್ತುವಾರಿ ರಾಜೇಶ್ ಬುರುಡೆಕಟ್ಟೆ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿಗೆ ನೇಮಿಸಿರುವ ಮೂವರ ತಂಡ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಪ್ರವಾಸ ಮಾಡಿ ಜನಸ್ವರಾಜ್ ಸಮಾವೇಶಕ್ಕೆ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಕರೆತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ತಿಳಿಸಿದರು.
ಮಂಡಲ ಉಸ್ತುವಾರಿ ಜಿ.ಎಸ್.ಅನಿತ್‍ಕುಮಾರ್, ಮಂಡಲ ಅಧ್ಯಕ್ಷ ಸಿದ್ದೇಶ್ ಮಾತನಾಡಿದರು.
ಹೊಳಲ್ಕೆರೆ ಮಂಡಲ ಉಸ್ತುವಾರಿ ದಗ್ಗೆಶಿವಪ್ರಕಾಶ್, ಪುರಸಭೆ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಎಸ್.ಆರ್.ಗಿರೀಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪ ಸುರೇಶ್, ಜಗದೀಶ್, ಪಟ್ಟಣ ಪಂಚಾಯಿತಿ ಸದಸ್ಯ ಮುರುಗೇಶ್ ಸೇರಿದಂತೆ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.