ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ.ಯುವ ಮುಖಂಡ ಅನಿತ್ ತಿಳಿಸಿದರು.
ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸದ್ಯದಲ್ಲಿ ಎದುರಾಗಲಿರುವುದರಿಂದ ದೇಶದ ಪ್ರಧಾನಿ ನರೇಂದ್ರಮೋದಿರವರು ನೀಡಿರುವ ಅನೇಕ ಜನಪರ ಯೋಜನೆಗಳನ್ನು ಜನತೆಯ ಮುಂದೆ ತಿಳಿಸಬೇಕಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಕೂಡ ನಡೆಯಲಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು.
ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿರವರು ಎಂಟು ವರ್ಷಗಳಲ್ಲಿ ದೇಶವನ್ನು ಸಾಕಷ್ಟು ಅಭಿವೃದ್ದಿಯತ್ತ ಕೊಂಡೊಯ್ದಿದ್ದಾರೆ. ಅವರ ಕೈಬಲಪಡಿಸಿ ಮುಂದೆಯೂ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡುತ್ತ ದೀನದಲಿತರು, ಬಡವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಿಗಬೇಕಾದರೆ ಮತ್ತೆ ಬಿಜೆಪಿ.ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಬೂತ್ ಬೂತ್ ಮಟ್ಟಗಳಲ್ಲಿ ಪ್ರವಾಸ ಮಾಡಿ ಯೋಜನಾಬದ್ದವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು. ದೇಶ ಅಭಿವೃದ್ದಿಯತ್ತ ಸಾಗುತ್ತಿರುವುದನ್ನು ನೋಡಿ ಸಹಿಸಲು ಆಗದ ಕಾಂಗ್ರೆಸ್‍ನವರು ಬಿಜೆಪಿ.ಕೋಮುವಾದ, ಜಾತಿವಾದ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡುವ ಎದೆಗಾರಿಕೆಯನ್ನು ಕಾರ್ಯಕರ್ತರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸುವರ್ಣ ಚತುಷ್ಪಥ ಹೆದ್ದಾರಿ, ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷ ಅಭಿಯಾನ ಇನ್ನು ನೂರಾರು ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ಮುಟ್ಟಿಸುವ ಕೆಲಸವಾಗಬೇಕು. ಅಧಿಕಾರಕ್ಕಾಗಿ ಬಿಜೆಪಿ.ಯಲ್ಲ. ದೇಶದ ಅಭಿವೃದ್ದಿಗಾಗಿ ಬಿಜೆಪಿ.ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸಲು ಸಾಧ್ಯ. ಒಂದೊಂದು ಗ್ರಾಮ ಪಂಚಾಯಿತಿಗೆ ಒಬ್ಬೊಬ್ಬ ಪ್ರಮುಖರನ್ನು ನೇಮಿಸಿ ಬೂತ್‍ಗಳಲ್ಲಿ ನಿರಂತರ ಪ್ರವಾಸ ಮಾಡಿ ಪಕ್ಷದ ವಿಚಾರಗಳನ್ನು ತಿಳಿಸದಿದ್ದರೆ ನಿಮಗೆ ನೀವೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
ರೈತರಿಗೆ ನೂರಾರು ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ನಿಮಗೆ ನೀಡಿರುವ ಅಧಿಕಾರವನ್ನು ಯೋಜನಾ ಬದ್ದವಾಗಿ ಪಾಲನೆ ಮಾಡಿದಾಗ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ.ಚಿತ್ರದುರ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಮಾತನಾಡುತ್ತ ಎರಡು ವರ್ಷಗಳ ಕಾಲ ದೇಶವನ್ನು ಕಾಡಿದ ಕೊರೋನಾ ಸಂದರ್ಭದಲ್ಲಿ ಲಾಕ್‍ಡೌನ್ ಮೂಲಕ ದಿಟ್ಟ ನಿರ್ಧಾರ ಕೈಗೊಂಡ ದೇಶದ ಪ್ರಧಾನಿ ಮೋದಿ ಮಹಾಮಾರಿ ಕೊರೋನಾವನ್ನು ಕಟ್ಟಿಹಾಕಿದ್ದರಿಂದ ನಮ್ಮ ದೇಶದಲ್ಲಿ ಸಾವು-ನೋವಿನ ಪ್ರಮಾಣ ಹತೋಟಿಯಲ್ಲಿಡಲು ಸಾಧ್ಯವಾಯಿತು.
ಮುಂದುವರೆದ ದೇಶಗಳು ಸಾಕಷ್ಟು ಪರದಾಡಿದವು. ವಿರೋಧ ಪಕ್ಷದವರು ಬಾಯಿಗೆ ಬಂದಂತೆ ಪ್ರಧಾನಿಯನ್ನು ಟೀಕಿಸಿದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮೋದಿರವರು ಕೊರೋನಾದಿಂದ ದೇಶವನ್ನು ರಕ್ಷಿಸಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ವಿನಂತಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಮಾತನಾಡಿ ಹದಿನೆಂಟು ಕೋಟಿ ಸದಸ್ಯರನ್ನು ಹೊಂದಿರುವ ಬಿಜೆಪಿ.ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಚನಿಷ್ಟೆ ಆಧಾರದ ಮೇಲೆ ನಿಂತಿರುವ ಬಿಜೆಪಿ.ಯ ತತ್ವ ಸಿದ್ದಾಂತವನ್ನು ತಿಳಿದುಕೊಂಡಾಗ ಮಾತ್ರ ಕಾರ್ಯಕರ್ತ ಪರಿಪಕ್ವವಾಗಲು ಸಾಧ್ಯ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಬೂತ್ ಮಟ್ಟಗಳಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು.
ಸಂಘಟನೆ ಅತಿ ಮುಖ್ಯ. ಸ್ಥಳೀಯ ಶಾಸಕರ ಅಭಿವೃದ್ದಿ ಕೆಲಸಗಳನ್ನು ಜನತೆಗೆ ತಿಳಿಸಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ಎ.ರೇಖ ಮಾತನಾಡುತ್ತ ಬಿಜೆಪಿ. ಎಂದರೆ ಎಲ್ಲರಿಗೂ ಹುಮ್ಮಸ್ಸು ಮೂಡುತ್ತದೆ. ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿ ಗುರುತಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಮಾತ್ರ. ನಿರಂತರವಾಗಿ ಪಕ್ಷದ ಕೆಲಸಗಳಲ್ಲಿ ತೊಡಗಿಕೊಂಡು ಬೂತ್, ವಾರ್ಡ್, ಪಂಚಾಯಿತಿ ಮಟ್ಟಗಳಲ್ಲಿ ಪಕ್ಷದ ಸಾಧನೆಗಳನ್ನು ತಿಳಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.
ಕೊಲ್ಲಿಲಕ್ಷ್ಮಿ ಮಾತನಾಡಿದರು.
ಉಪಾಧ್ಯಕ್ಷರುಗಳಾದ ಚಂದ್ರಿಕಾ ಲೋಕನಾಥ್, ಕಲ್ಲೇಶಯ್ಯ, ಚಿತ್ರದುರ್ಗ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ್‍ಕುಮಾರ್, ವೀರೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವಕೋಟಿ, ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ವೇದಿಕೆಯಲ್ಲಿದ್ದರು.