ಚಿತ್ರದುರ್ಗ, (ಜೂನ್.23) : ಚಿತ್ರದುರ್ಗದಲ್ಲಿ ಇದೇ ವರ್ಷದಿಂದಲೇ ಸರ್ಕಾರಿ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಬೋಧನಾ ಕಾರ್ಯ ಪ್ರಾರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಸಿದ್ಧತಾ ಕ್ರಮಗಳನ್ನು ಪ್ರಾರಂಭಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಈ ಸಾಲಿನ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗದಲ್ಲಿ ಈ ವರ್ಷ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮತಿ ದೊರೆತಿದ್ದು, ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಬೋಧನೆಗಾಗಿ ತಾತ್ಕಾಲಿಕವಾಗಿ ಸ್ಥಳಾವಕಾಶ ಬೇಕಾಗಿದೆ. ಇದಕ್ಕಾಗಿ ಚಿತ್ರದುರ್ಗ ಬಳಿಯ ಜಿ.ಆರ್. ಹಳ್ಳಿ ಸಮೀಪದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಬೋಧನಾ ಕಾರ್ಯ ಪ್ರಾರಂಭಕ್ಕೆ ಅನುಮತಿ ಕೋರಲಾಗಿದ್ದು, ವಿವಿ ಕುಲಪತಿಗಳಿಂದ ಅನುಮತಿ ದೊರೆತಿಲ್ಲ. ಮೆಡಿಕಲ್ ಕಾಲೇಜಿಗೆ ಕನಿಷ್ಟ 80 ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಆರ್ಥಿಕ ಇಲಾಖೆಯಲ್ಲಿ ಉಳಿದಿದೆ, ಅಲ್ಲದೆ ಆಡಳಿತಾತ್ಮಕ ಕಾರ್ಯ ನಿರ್ವಹಣೆಗೂ ಅನುದಾನ ಸರ್ಕಾರದಿಂದ ಬಿಡುಗಡ ಆಗಬೇಕಿದೆ ಎಂದು ಮೆಡಿಕಲ್ ಕಾಲೇಜಿನ ವಿಶೇಷಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಉತ್ತರಿಸಿ, ವಿವಿ ಯ ಪಿ.ಜಿ. ಸೆಂಟರ್‍ನಲ್ಲಿ ಎರಡು ಬ್ಲಾಕ್ ಗಳಿದ್ದು, ಈ ಪೈಕಿ ವಿವಿ ಅವರು ಒಂದು ಬ್ಲಾಕ್ ಅನ್ನು ಒದಗಿಸಿದಲ್ಲಿ, ತಾತ್ಕಾಲಿಕವಾಗಿ ಇದೇ ಕಟ್ಟಡದಲ್ಲಿ ಮೊದಲ ವರ್ಷದ ಎಂಬಿಬಿಎಸ್ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವರ್ಷವೇ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ಅಗತ್ಯ ಅನುಮತಿ ಹಾಗೂ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಒಟ್ಟಾರೆ ಇದೇ ವರ್ಷದಿಂದಲೇ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಎಲ್ಲ ಯತ್ನ ಮಾಡಲಾಗುವುದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಅರ್ಹ ಬಡವರನ್ನು ಗುರುತಿಸಿ, ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಬಡವರ ಪರವಾದ ಕಾರ್ಯಕ್ರಮಗಳಿಗೆ ಸಹಕಾರ ಕೊಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳ ಅಸಡ್ಡೆ ಹಾಗೂ ಭ್ರಷ್ಠಾಚಾರ ಸಹಿಸುವುದಿಲ್ಲ. ಜನರ ತೆರಿಗೆ ಹಣದಿಂದ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದು, ಅದಕ್ಕೆ ನ್ಯಾಯ ಕೊಡುವ ಕೆಲಸ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.
ತೆಂಗು ರೋಗ ಬಾಧೆ ನಿಯಂತ್ರಣಕ್ಕೆ ಸೂಚನೆ : ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುವಿನ ಬಾಧೆ ಹೆಚ್ಚಾಗಿದ್ದು, ರೋಗಬಾಧೆಯಿಂದ ತೆಂಗಿನ ಮರಗಳು ಒಣಗಿ, ಸುಳಿ ಬಿದ್ದು ಹೋಗುತ್ತಿವೆ. ಇದರಿಂದ ತೆಂಗು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ, ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಪ್ರಶ್ನಿಸಿದರು.
ಉತ್ತರಿಸಿದ ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಅವರು, ಹೊಸದುರ್ಗ ತಾಲ್ಲೂಕಿನಲ್ಲಿ 1620 ಹೆ., ಹಿರಿಯೂರು-433 ಹೆ., ಹೊಳಲ್ಕೆರೆ-830 ಹೆ. ಪ್ರದೇಶದಲ್ಲಿ ತೆಂಗು ಬೆಳೆ ಕಪ್ಪುತಲೆ ಹುಳು ಬಾಧೆಗೆ ಒಳಗಾಗಿದ್ದು, ಈ ಬಗ್ಗೆ ಸರ್ವೆ ಮಾಡಲಾಗಿದೆ. ಅತಿ ಉಷ್ಣಾಂಶದಿಂದ ರೋಗ ಉಲ್ಬಣವಾಗಿದ್ದು, ಮಳೆ ಉತ್ತಮವಾಗಿ ಸುರಿದರೆ, ರೋಗ ಕಡಿಮೆ ಆಗುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೋಗ ನಿಯಂತ್ರಣಕ್ಕೆ ತಜ್ಞರೊಂದಿಗೆ ಚರ್ಚಿಸಲಾಗಿದ್ದು, ವಿಜ್ಞಾನಿಗಳು ಸೋಮವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ, ಸುಮಾರು 2 ಸಾವಿರ ಹೆ. ಪ್ರದೇಶಕ್ಕೆ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ, ಇದಕ್ಕಾಗಿ ಅಂದಾಜು 8 ಕೋಟಿ ರೂ. ಗಳ ಅಗತ್ಯವಾಗಬಹುದು. ವಿಜ್ಞಾನಿಗಳು ಸಲ್ಲಿಸುವ ವರದಿ ಆಧಾರದಲ್ಲಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಕ್ರಿಯಿಸಿದ ಶಾಸಕ ಗೋವಿಂದಪ್ಪ, ರೋಗ ನಿಯಂತ್ರಣಕ್ಕೆ ಸರ್ಕಾರದ ಮಟ್ಟದಲ್ಲಿ ತುರ್ತು ಕ್ರಮ ಆಗಬೇಕು ಎಂದರು.
ಬೆಳೆ ಪರಿಹಾರ ಹಣ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸಲು ಮನವಿ : ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡದೆ, ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಕೆಲವೇ ಕೆಲವು ಪ್ರಕರಣಗಳಲ್ಲಿ ಕ್ರಮ ಆಗಿದೆ. ಆದರೆ ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳು ನಡೆದಿರುವ ಸಾಧ್ಯತೆಗಳಿದ್ದು, ಬೆಳೆ ಪರಿಹಾರದ ಜೊತೆಗೆ ಬೆಳೆ ವಿಮೆ ಪರಿಹಾರದ ಮೊತ್ತ ಪಾವತಿಯ ಹಣ ದುರ್ಬಳಕೆ ಬಗ್ಗೆ ಸಮಗ್ರ ತನಿಖೆಗೆ ಸಮಿತಿ ರಚಿಸುವಂತೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪ್ರತಿಕ್ರಿಯಿಸಿ, ಈಗಾಗಲೆ ದೂರುಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಾರ್ಟ್ ಕೇರ್ ಸೆಂಟರ್ ಪ್ರಾರಂಭಕ್ಕೆ ಒತ್ತಾಯ : ಹೃದಯ ಸಂಬಂಧಿ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹಾರ್ಟ್ ಕೇರ್ ಸೆಂಟರ್ ಒಂದನ್ನು ಸರ್ಕಾರಿ ಹಾಗೂ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ದಲ್ಲಿ ಪ್ರಾರಂಭಿಸಿ, ಜಿಲ್ಲೆಯ ಜನಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಮಹಿಳೆಯರ ಬಸ್ ಪ್ರಯಾಣ ಹೆಚ್ಚಳ : ಸರ್ಕಾರ ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸಲು ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿ ಚಿತ್ರದುರ್ಗ ಕೆಎಸ್‍ಆರ್‍ಟಿಸಿ ವಿಭಾಗದಲ್ಲಿ ನಿತ್ಯ ಸುಮಾರು 60 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದರ ವೆಚ್ಚ ಸುಮಾರು 20 ಲಕ್ಷ ರೂ. ಆಗುತ್ತದೆ. ಈ ಮೊದಲು ಸುಮಾರು 7 ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದರು.
ವಿಭಾಗದಲ್ಲಿ ಪ್ರತಿ ದಿನ 290 ಬಸ್‍ಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಮೊದಲು ನಿತ್ಯ ಸುಮಾರು 35 ಲಕ್ಷ ರೂ. ಕಲೆಕ್ಷನ್ ಆಗುತ್ತಿತ್ತು, ಈಗ ಮಹಿಳೆಯರ ಉಚಿತ ಪ್ರಯಾಣದ ಮೊತ್ತ ಸೇರಿದಂತೆ 45 ಲಕ್ಷ ರೂ. ಆಗುತ್ತಿದೆ. ವಿಭಾಗಕ್ಕೆ ಹೊಸದಾಗಿ ಸುಮಾರು 100 ಹೊಸ ಬಸ್ ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ ಅವರು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಕ್ತಿ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರು ಪ್ರಯಾಣಿಸುವ ಪ್ರಯಾಣದ ವೆಚ್ಚದ ಮೊತ್ತವನ್ನು ಸರ್ಕಾರವೇ ಸಾರಿಗೆ ಸಂಸ್ಥೆಗೆ ಭರಿಸಲಿದೆ. ಸಾರ್ವಜನಿಕರ ಪ್ರಯಾಣಕ್ಕೆ ಸಂಸ್ಥೆಯಿಂದ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರು ಮಾತನಾಡಿ, ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಹೆಚ್ಚಿಸಬೇಕು. ಚಿತ್ರದುರ್ಗ ಬಸ್ ನಿಲ್ದಾಣದ ಬಳಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಪೊಲೀಸ್ ಬೀಟ್ ಹೆಚ್ಚಿಸಬೇಕು, ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು, ಶನಿವಾರ ಮತ್ತು ಭಾನುವಾರದಂದು ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಪುನರಾರಂಭಿಸಬೇಕು ಎಂದು ಸೂಚನೆ ನೀಡಿದರು.
ಡಿವೈಡರ್ ತೆರವಿಗೆ ಕ್ರಮ : ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರು ಮಾತನಾಡಿ, ಚಿತ್ರದುರ್ಗ ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್‍ಗಳದ್ದು, ಪ್ರಮುಖ ಸಮಸ್ಯೆಯಾಗಿದೆ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಏಕಮುಖ ಸಂಚಾರವಿರುವ ರಸ್ತೆಯಲ್ಲೂ ಡಿವೈಡರ್ ನಿರ್ಮಿಸಿದ್ದೀರಿ, ಸಾರ್ವಜನಿಕರು, ವಾಹನ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ, ಡಿವೈಡರ್‍ಗಳನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ನಿತ್ಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಅವರು ಉತ್ತರಿಸಿ, ರಸ್ತೆ, ಡಿವೈಡರ್, ಡಿವೈಡರ್ ಮೇಲೆ ಅಲಂಕಾರಿಕ ಗಿಡ ಸೇರಿದಂತೆ ಒಟ್ಟು 32 ಕೋಟಿ ರೂ. ಅನುದಾನದಡಿ ನಿರ್ಮಿಸಲಾಗಿದೆ, ಡಿವೈಡರ್ ಬಗೆಗಿನ ಸಮಸ್ಯೆ ಬಗ್ಗೆ ಸಮೀಕ್ಷಾ ವರದಿ ಪಡೆಯಲಾಗುತ್ತಿದ್ದು, ಇದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರತಿಕ್ರಿಯಿಸಿ, ಚಿತ್ರದುರ್ಗ ನಗರದಲ್ಲಿನ ಡಿವೈಡರ್‍ಗಳನ್ನು ನಾನು ಗಮನಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ, ಅಧಿಕಾರಿಗಳು ಬ್ಲಾಕ್‍ಸ್ಪಾಟ್, ತಿರುವು ಪ್ರದೇಶಗಳು ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದೊಳಗೆ ವರದಿಯನ್ನು ಸಲ್ಲಿಸಬೇಕು, ಸಮಸ್ಯೆ ಪರಿಹಾರ ಆಗುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿಸಬಾರದು ಎಂದು ತಾಕೀತು ಮಾಡಿದರು.
ವಸತಿ ನಿಲಯದ ವಿದ್ಯಾರ್ಥಿಗಳಿಂದ ದೂರಬಾರದಂತೆ ಕ್ರಮ ವಹಿಸಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಬಗ್ಗೆ ಯಾವುದೇ ದೂರುಗಳು ಬಾರದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸೂಚನೆ ನೀಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಹಾಸ್ಟೆಲ್ ನಿರಾಕರಣೆ ಮಾಡಬಾರದು. ಬಾಡಿಗೆ ಕಟ್ಟಡದಲ್ಲಾದರೂ ವ್ಯವಸ್ಥೆ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್‍ನಲ್ಲಿ ಸೀಟು ಕೊಡುವ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು.
ಆಹಾರ ಸಾಮಾಗ್ರಿ ಹಾಗೂ ಟೆಂಡರ್‍ದಾರರ ಸಭೆ ನಡೆಸಿ ಗುಣಮಟ್ಟದ ಸಾಮಗ್ರಿಗಳ ಸರಬರಾಜು ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಆಹಾರ ಹಾಗೂ ಉತ್ತಮವಾದ, ಶುಭ್ರವಾದ ತರಕಾರಿಗಳನ್ನು ವಿದ್ಯಾರ್ಥಿನಿಲಯಗಳಿಗೆ ತಲುಪಿಸಲಾಗುತ್ತಿದೆ. ಈ ಕುರಿತು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಗುಣಮಟ್ಟದ ಆಹಾರ ಸಾಮಾಗ್ರಿ ಸರಬರಾಜು ಪೂರೈಕೆ ಕುರಿತು ದಿಢಿರನೇ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಒಂದು ವೇಳೆ ಲೋಪದೋಷ ಕಂಡುಬಂದರೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ತಮ್ಮ ತಂದೆ ತಾಯಿಗಳನ್ನು ಬಿಟ್ಟು ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಾರೆ.
ವಿದ್ಯಾರ್ಥಿಗಳನ್ನು ಉತ್ತಮವಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಊಟದಲ್ಲಿ ಕಳ್ಳತನ ಮಾಡುವುದು ದೊಡ್ಡ ಅಪರಾಧ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ತಾಜಾ ತರಕಾರಿಗಳಿಂದ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚಿಸಿದರು. ಯಾರೋ ಒಬ್ಬರು ಟೆಂಡರ್ ತೆಗೆದುಕೊಂಡು, ಸ್ಥಳೀಯರಿಂದ ಸರಬರಾಜು ಮಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸಿಇಒ ಎಂ.ಎಸ್.ದಿವಾಕರ್, ಬಿಲ್ ಮಾಡಲು ಡೆಲಿವರಿ ಚಲನ್ ಹಾಗೂ ವಾಹನ ಸಂಖ್ಯೆ ನಮೂದಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಳಲ್ಕೆರೆ ಶಾಸಕ ಚಂದ್ರಪ್ಪ ಎಂ. ಮಾತನಾಡಿ ಜಿಲ್ಲೆಯ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯವಾಗಿ ಆಯಾ ತಾಲ್ಲೂಕಿನವರಿಗೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಈಗಿರುವ ಶೇ.25ರ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಬೇಕು. ಇದರಿಂದ ಆಯಾ ತಾಲ್ಲೂಕಿನ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಕೆಇಎ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಮೆರಿಟ್ ಆಧಾರದ ಮೇಲೆ ಮಾಡಲಾಗುತ್ತಿದೆ. ಆಯ್ಕೆ ಸಂದರ್ಭದಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳಿಗೆ ಪ್ರಾಧ್ಯಾನತೆ ನೀಡಲಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಸತಿ ಶಾಲೆಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹೇಳಿದರು.
ಸಭೆಯಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಕೆ.ಎನ್. ನವೀನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಸಿಇಒ ಕೆ.ಎಸ್. ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.