ವರದಿ: ಸುರೇಶ್ ಪಟ್ಟಣ್

ಚಿತ್ರದುರ್ಗ, (ಫೆ.19) : ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜ್ ಆರಂಭಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಜೊತೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭಿಸಲು ಅಗತ್ಯವಾಗಿ ಆಡಳಿತಾಧಿಕಾರಿಗಳ ನೇಮಕ ಕೂಡ ಮಾಡಬೇಕಿದೆ. 150 ಸೀಟುಗಳ ವೈದ್ಯಕೀಯ ಕಾಲೇಜ್‍ನ್ನು 2023-24ರ ಶೈಕ್ಷಣಿಕ ವರ್ಷಕ್ಕೆ ಆರಂಭಿಸಲಾಗುತ್ತದೆ. ಸಿವಿಲ್ ಕಾಮಗಾರಿಗಳು ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭಕ್ಕೆ ಅಗತ್ಯವಾಗಿ ಬೇಕಿರುವ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಸರ್ಕಾರ ಬಹುದೊಡ್ಡ ಕೊಡುಗೆ ನೀಡಿದೆ. ಇಲ್ಲಿನ ಬಡ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸೂಕ್ತ ಕ್ರಮ ಕೈಗೊಂಡಿದೆ. ವೈದ್ಯಕೀಯ ಕಾಲೇಜ್ ಆರಂಭವಾದರೆ ನುರಿತ ಅನುಭವಿ ತಜ್ಞ ವೈದ್ಯರ ತಂಡವೇ ಇಲ್ಲಿ ಸೇವೆ ನೀಡಲಿದೆ. ಇದರಿಂದಾಗಿ ಚಿತ್ರದುರ್ಗ, ತುಮಕೂರು, ಕಲ್ಯಾಣದುರ್ಗ, ರಾಯದುರ್ಗ ಸೇರಿದಂತೆ ಮತ್ತಿತರ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಕಳೆದ ಬಜೆಟ್‍ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಖಾಸಗಿ-ಸರ್ಕಾರಿ ಸಹಭಾಗಿತ್ವದ ವೈದ್ಯಕೀಯ ಕಾಲೇಜ್ ಮಂಜೂರು ಮಾಡಿದ್ದರು. ಆದರೆ ನಾನು ಇದನ್ನು ಪ್ರಬಲವಾಗಿ ವಿರೋಧಿಸಿದೆ. ಇಡೀ ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಇತರೆ ಅತಿ ಹಿಂದುಳಿದ ಜಾತಿಗಳೇ ಹೆಚ್ಚಾಗಿರುವುದರಿಂದ ಸರ್ಕಾರಿ ವೈದ್ಯಕೀಯ ಕಾಲೇಜ್ ನೀಡಬೇಕೆಂದು ನಾನು ಪಟ್ಟು ಹಿಡಿದೆ. ಖಾಸಗಿ-ಸರ್ಕಾರಿ ವೈದ್ಯಕೀಯ ಕಾಲೇಜ್ ಇದ್ದಿದ್ದರೆ ಬಡವರಿಗೆ ಯಾವುದೇ ಕಾರಣಕ್ಕೂ ಅನುಕೂಲವಾಗುತ್ತಿರಲಿಲ್ಲ, ಆದ್ದರಿಂದ ಜಿಲ್ಲೆಯ ಜನರ ಹಿತದೃಷ್ಠಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಬಹು ದಿನಗಳ ಕನಸು ಈಡೇರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಸರ್ಕಾರವು ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ 500 ಕೋಟಿ ರೂ.ಮಂಜೂರು ಮಾಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ 25 ಕೋಟಿ ರೂ.ಗಳಿದ್ದು ಅಗತ್ಯವಾಗಿ ಬೇಕಿರುವ ಅನುದಾನವನ್ನು ಜಿಲ್ಲಾ ಖನಿಜ ನಿಧಿಯಿಂದ ಪಡೆಯಲಾಗುತ್ತದೆ. 200 ಕೋಟಿ ರೂ. ತನಕ ಜಿಲ್ಲಾ ಖನಿಜ ನಿಧಿ ಬಳಕೆ ಮಾಡಬಹುದಾಗಿದ್ದು ಮಿಕ್ಕ ಹಣವನ್ನು ಸರ್ಕಾರ ನೀಡಲಿದೆ ಎಂದು ಶಾಸಕ ತಿಪ್ಪಾರೆಡ್ಡಿ ಅವರು ತಿಳಿಸಿ ಚಿತ್ರದುರ್ಗ ಜಿಲ್ಲೆಗೆ ಮಂಜೂರಾಗಿರುವುದು ಖಾಸಗಿ-ಸರ್ಕಾರಿ ಸಹಭಾಗಿತ್ವದ ವೈದ್ಯಕೀಯ ಕಾಲೇಜ್ ಅಲ್ಲ, ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜ್, ಆತಂಕ ಬೇಡ ಎಂದು ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಮಾಜಿ ಜಿಪಂ ಸದಸ್ಯ ನಾಗಿರೆಡ್ಡಿ, ನಗರಸಭೆ ಮಾಜಿ ಸದಸ್ಯ ಕರವೇ ರಮೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

