ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಫೆ.20: ಮ್ಯಾದನಹೊಳೆ ಗ್ರಾಮದ ನಿವೇಶನ ರಹಿತರಿಗೆ ಭೂಮಿ ನೀಡಲು ಸರ್ವೇ ನಂಬರ್ 63 ರಲ್ಲಿ 5 ಎಕರೆ ಜಮೀನು ಮಂಜೂರಾತಿಗೆ ಹಿರಿಯೂರು ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿಗೆ ಕಡತ ಸಲ್ಲಿಸಿದ್ದಾರೆ. ಶೀಘ್ರವೇ ಕಡತ ವಿಲೇವಾರಿ ಮಾಡಿ ಭೂಮಿ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಹಿರಿಯೂರು ತಾಲೂಕು ಇಕ್ಕನೂರು ಗ್ರಾಮ ಪಂಚಾಯತಿಯ ಮ್ಯಾದನಹೊಳೆ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣ ಮಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮಸಭೆಗೆ ಅಧಿಕಾರ ನೀಡಲಾಗಿದೆ. ಯಾವೊಬ್ಬ ಫಲಾನುಭವಿಗಳು ಹೊರಗುಳಿಯದಂತೆ, ಸರ್ಕಾರದ ಮಾನದಂಡ ಹಾಗೂ ಮಾರ್ಗಸೂಚಿಗಳ ಅನುಸಾರ ಗ್ರಾಮದ ನಿವೇಶನ ರಹಿತರ ಪಟ್ಟಿಯನ್ನು ಮತ್ತೊಮ್ಮೆ ಸರ್ವೇ ಮೂಲಕ ಸಿದ್ದಪಡಿಸಿ, ಅಗತ್ಯ ಜಮೀನು ಮಂಜೂರಾತಿಗೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಸ್ತಾವನೆ ಸಲ್ಲಿಸಿ. ಸೂಕ್ತ ಜಮೀನಿನ ಬಗ್ಗೆ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ. ಆದಷ್ಟು ಬೇಗನೆ ಸ್ಥಳ ಮಂಜೂರು ಮಾಡಲಾಗುವುದು ಎಂದರು.
ರೂ.15 ಲಕ್ಷ ವೆಚ್ಚದಲ್ಲಿ ಮ್ಯಾದನಹೊಳೆ ಗ್ರಾಮ ಸಂಪರ್ಕಿಸುವ ಸೇತುವೆ ತಾತ್ಕಾಲಿಕ ದುರಸ್ಥಿ
ಮ್ಯಾದನಹೊಳೆ ಗ್ರಾಮದ ಬಹುಮುಖ್ಯ ಸಮಸ್ಯೆಯಾದ ಸಂಪರ್ಕ ಕಲ್ಪಿಸುವ ಸೇತುವೆಯ ತಾತ್ಕಾಲಿಕ ದುರಸ್ಥಿಗಾಗಿ ರೂ.15 ಲಕ್ಷ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಲೋಕೋಪಯೋಗಿ ಇಲಾಖೆ ವತಿಯಿಂದ ಶಾಶ್ವತ ಸೇತುವೆ ನಿರ್ಮಾಣಕ್ಕೆ ರೂ.10 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉದ್ಯೋಗ ಖಾತ್ರಿ ಯೊಜನೆಯಡಿ ‘ನಮ್ಮ ಹೊಲ ನಮ್ಮ ದಾರಿ’ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಗ್ರಾ.ಪಂ.ಕ್ರಿಯಾ ಯೋಜನೆಯಲ್ಲಿ ಇವುಗಳನ್ನು ಸೇರಿಸಿ. ಜಾಗದ ವಿಚಾರವಾಗಿ ಕಂದಾಯ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಜನರಿಂದ ಬೇಡಿಕೆ ಅನುಗುಣವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಸ್ವಚ್ಛ ಭಾರತ ಯೋಜನೆಯಡಿ ಮನೆಗಳಿಗೆ ಶೌಚಾಲಯ ನಿರ್ಮಿಸಲು ಅವಕಾಶವಿದೆ. ಈ ಯೋಜನೆ ಮುಕ್ತಾಯವಾಗಿಲ್ಲ. ಜನರು ಅರ್ಜಿ ಸಲ್ಲಿಸಬಹುದು. ತಂತ್ರಾಂಶದ ತೊಂದರೆಯಿಂದಾಗಿ ಈ ಹಿಂದೆ ಶೌಚಾಲಯ ನಿರ್ಮಾಣ ಅನುದಾನ ಬಿಡುಗಡೆಯಾಗಿಲ್ಲ. ಸದ್ಯ ಗ್ರಾ.ಪಂ.ಖಾತೆಗೆ ನೇರವಾಗಿ ಅನುದಾನ ಬಿಡುಗಡೆಯಾಗಲಿದ್ದು, ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುವುದು. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸೂಕ್ತ ಜಾಗ ಲಭ್ಯವಿದ್ದರೆ, ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ
ಜನರ ಮನೆ ಬಾಗಿಲಿಗೆ ತೆರಳಿ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕಂದಾಯ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ಬಂದಿದ್ದಾರೆ. ಜನರು ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ಮಾಹಿತಿ ಪಡೆಯವ ಅವಶ್ಯಕತೆ ಇಲ್ಲ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳೊಡನೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ತಹಶಿಲ್ದಾರ ಪ್ರಶಾಂತ್ ಕೆ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿ, ಮ್ಯಾದನಹೊಳೆ ಗ್ರಾಮ ಜಿಲ್ಲಾ ಕೇಂದ್ರದಿಂದ 58 ಕಿ.ಮೀ ತಾಲೂಕು ಕೇಂದ್ರ 28 ಕಿ.ಮೀ.ದೂರದಲ್ಲಿದೆ. ಗ್ರಾಮದಲ್ಲಿ ಒಟ್ಟು 128 ಮನೆಗಳಿದ್ದು 720 ಜನಸಂಖ್ಯೆ ಹೊಂದಿದೆ. 283 ಪುರುಷ ಹಾಗೂ 270 ಮಹಿಳಾ ಮತದಾರರು ಸೇರಿದಂತೆ ಒಟ್ಟು 553 ಮತದಾರರು ಇದ್ದಾರೆ. ಮತದಾರರ ಪಟ್ಟಿ ಹೆಸರು ಸೇರಿಸಲು ಇನ್ನೂ ಅವಕಾಶವಿದೆ.
ಅರ್ಹ ಮತದಾರರು ಬಿ.ಎಲ್.ಓ ಗಳ ಮೂಲಕ ಮತ ಪಟ್ಟಿ ಸೇರಲು ಅರ್ಜಿ ಸಲ್ಲಿಸಬಹುದು. ಗ್ರಾಮದಲ್ಲಿ 204 ಖಾತೆಗಳಿವೆ. 74 ಸಣ್ಣ 60 ಅತಿ ಸಣ್ಣ ಹಾಗೂ 68 ದೊಡ್ಡ ರೈತರು ಇದ್ದಾರೆ. ಗ್ರಾಮದಲ್ಲಿ 162 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. 2 ಬಿ.ಪಿ.ಎಲ್ ಕಾರ್ಡ್ ಅರ್ಜಿ ಸ್ವೀಕೃತವಾಗಿದ್ದು ಇವರಿಗೂ ಸಹ ಶೀಘ್ರದಲ್ಲೇ ಕಾರ್ಡ್ ನೀಡಲಾಗುವುದು. ತಾಲೂಕಿನಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿ ಪರಿಹಾರ ಧನ ರೂ.31 ಕೋಟಿಯನ್ನು ರೈತರಿಗೆ ಖಾತೆಗೆ ಹಣ ಜಮೆ ಮಾಡಲಾಗಿದೆ. ಮನೆ ಹಾನಿಗೆ ಒಳಗಾದ 190 ಕುಟುಂಬಗಳಿಗೆ ರೂ.50 ಸಾವಿರ ನೀಡಲಾಗಿದೆ. ಶೀಘ್ರವಾಗಿ ತಾಲೂಕಿನ 1913 ಜನರಿಗೆ ಮನೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ತಾಲೂಕಿನಲ್ಲಿ ಫಾರ್ ನಂಬರ್ 50 ಅಡಿ ಯಾವುದೇ ಬಗರ್ ಹುಕುಂ ಜಮೀನು ಅರ್ಜಿ ಸಲ್ಲಿಕೆಯಾಗಿಲ್ಲ.
ಫಾರಂ ನಂಬರ್ 53 ರಲ್ಲಿ 3713 ಅರ್ಜಿ ಸಲ್ಲಿಕೆಯಾಗಿದೆ. 513 ಅರ್ಜಿಗಳ ಸರ್ವೇ ಕಾರ್ಯಮುಗಿದಿದೆ. ಫಾರಂ 57 ವಿಲೇವಾರಿಗೆ ಮೇ ತಿಂಗಳವರೆಗೆ ಕಾಲವಕಾಶವಿದ್ದು, ಯಾವುದೇ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಮುಂದೆ ಇರಿಸಿಲ್ಲ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ 162 ರಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 90 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸ್ವೀಕರಿಸಿದ ಅರ್ಜಿಗಳಿಗೆ ಅರ್ಜಿ ಸಂಖ್ಯೆ ನೀಡಲಾಗಿದೆ. ಕಂದಾಯ ಹಾಗೂ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಬೇರೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಿ ಕೊಡಲಾಗಿದೆ. ಮ್ಯಾದನಹೊಳೆ ಗ್ರಾಮವನ್ನು ಕಂದಾಯ ಸಮಸ್ಯೆ ಮುಕ್ತ ಗ್ರಾಮವಾಗಿ ಮಾಡಲಾಗುವುದು ಎಂದರು.
ಗ್ರಾಮದ ಹಿರಿಯ ಪುಟ್ಟಸ್ವಾಮಿ ಗೌಡ ಮಾತನಾಡಿ, 1991 ರಲ್ಲಿ ಅಂದಿನ ತಹಶೀಲ್ದಾರ್ 32 ಜನರಿಗೆ ಹಕ್ಕು ಪತ್ರ ನೀಡಿದ್ದಾರೆ. ಇದುವರೆವಿಗೂ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿಕೊಟ್ಟಿಲ್ಲ. ಇದರ ಬಗ್ಗೆ ಸರ್ಕಾರ ಮಟ್ಟದಲ್ಲಿ ಅರ್ಜಿಸಲ್ಲಿಸಿದ್ದೇವೆ. ಏನು ಉಪಯೋಗವಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು.
ಗ್ರಾಮದ ಗೋಮಾಳದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದವರಿಗೆ ದರ್ಖಾಸ್ತು ಜಮಿನು ಮಂಜೂರು ಮಾಡಿದ್ದಾರೆ. ಬೇರೆ ಊರಿನವರಿಗೆ ಜಮೀನು ನೀಡಿದ್ದಾರೆ. ಇದರೆ ಬಗ್ಗೆ ಸೂಕ್ತ ಪರಿಶೀಲನೆ ನಡಿಸಿ ಅರ್ಹರಿಗೆ ಜಮೀನು ನೀಡಬೇಕು. ಗ್ರಾಮ ಸಂಪರ್ಕ ಕಲ್ಪಿಸುವ ಸೇತುವೆ ಕುಸುದಿದೆ. ಇದರಿಂದ 6 ಕಿ.ಮಿ. ಸುತ್ತಿ ಒಡಾಟ ನೆಡೆಸುವ ಪರಿಸ್ಥಿತಿ ಇದೆ, ಇದನ್ನು ಸರಿಪಡಿಸಬೇಕು. ಗ್ರಾಮದಲ್ಲಿ ರಸ್ತೆಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಗ್ರಾಮದ ರಸ್ತೆಗಳಲ್ಲಿ ಮಾರ್ಗ ಸೂಚಿಗಳನ್ನು ಅಳವಡಿಸಬೇಕು. ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ಹಾಗೂ ದಾಸೋಹ ಮಂದಿರ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡವಂತೆ ಕೋರಿದರು.
ಗ್ರಾಮಸ್ಥ ವಿರೂಪಾಕ್ಷಪ್ಪ ಮಾತನಾಡಿ ಗ್ರಾಮದಲ್ಲಿ 100 ದಲಿತ ಕುಟುಂಬಗಳಿವೆ. ಇದುವರೆಗೂ ಗ್ರಾ.ಪಂ.ನಿಂದ ಹಂಚಿಕೆಯಾದ ನಿವೇಶನದ ಹಕ್ಕುಪತ್ರ ಲಭಿಸಿಲ್ಲ. ಗ್ರಾಮದ ದಲಿತ ಕೇರಿಗೆ ಸಾಮೂಹಿಕ ಶೌಚಾಲಯ ಹಾಗೂ ಭವನ ನಿರ್ಮಿಸುವಂತೆ ಮನವಿ ಮಾಡಿದರು.
*ವಿವಿಧ ಸೌಲಭ್ಯಗಳ ವಿತರಿಸಿದ ಜಿಲ್ಲಾಧಿಕಾರಿ*
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಇಕ್ಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮ್ಯಾದನಹೊಳೆ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಅವರು ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ವಿತರಿಸಲಾಯಿತು.
ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಇಲಾಖೆ ವತಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ, ಪೂರಕ ಪೌಷ್ಟಿಕಾಹಾರ ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಸ್ ಬುಕ್ ವಿತರಣೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಪಿಂಚಣಿ ನಿರ್ದೇಶನಾಲಯ ಹಾಗೂ ಕಂದಾಯ ಇಲಾಖೆ ವತಿಯಿಂದ ಪಿಂಚಣಿ ಆದೇಶ ಮಂಜೂರಾತಿ ಆದೇಶ ಪ್ರತಿ, ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ಸೌಲಭ್ಯ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸೀಮಂತ ಕಾರ್ಯಕ್ರಮ ಹಾಗೂ ಅನ್ನ ಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು.
*ವಿವಿಧ ಇಲಾಖೆ ಮಳಿಗೆಗಳು:* ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಂಗವಾಗಿ ಮ್ಯಾದನಹೊಳೆ ಗ್ರಾಮದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಕೃಷಿ ಇಲಾಖೆ ವಸ್ತು ಪ್ರದರ್ಶನಲ್ಲಿ ಕೃಷಿ ಇಲಾಖೆಯ ಸೌಲಭ್ಯ ಕುರಿತು ಮಾಹಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅಸಾಂಕ್ರಾಮಿಕ ರೋಗಗಳ ಕುರಿತು ತಪಾಸಣಾ ಶಿಬಿರದಲ್ಲಿ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ಯೋಜನೆ ಸೇರಿದಂತೆ ಮತಯಂತ್ರ ಪ್ರತ್ಯಾಕ್ಷಿಕೆಯನ್ನೂ ಸಹ ನೀಡಿ, ಮತದಾನ ಕುರಿತು ಅರಿವು ಮೂಡಿಸಲಾಯಿತು.
ಇಕ್ಕನೂರು ಗ್ರಾ.ಪಂ.ಅಧ್ಯಕ್ಷ್ಯೆ ರಾಧ ಜಗದೀಶ್, ಉಪಾಧ್ಯಕ್ಷೆ ಸತ್ತುಬಾಯಿ, ಸದಸ್ಯೆ ರಂಗಲಕ್ಷ್ಮೀ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಆಹಾರ ಇಲಾಖೆ ಜಂಟಿ ನಿರ್ದೆಶಕ ಮಧುಸೂಧನ್, ಡಿ.ಹೆಚ್.ಓ ಡಾ.ರಂಗನಾಥ್, ವಿಕಲಚೇತನರ ಕಲ್ಯಾಣಧಿಕಾರಿ ಜೆ
ವೈಶಾಲಿ, ಪಶು ಮತ್ತು ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸವಿತಾ, ತಾ.ಪಂ.ಇಓ ಶಿವಪ್ರಕಾಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ನಾಗಭೂಷಣ್ ಸ್ವಾಗತಿಸಿದರು. ಮ್ಯಾದನಹೊಳೆ ಹಾಗೂ ಇಕ್ಕನೂರು ಶಾಲೆಯ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.