ಚಿತ್ರದುರ್ಗ. ಜ.23: ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ಬಳಸಿಕೊಂಡು ಪ್ರಸಕ್ತ ವರ್ಷದಲ್ಲಿ ರಾಜ್ಯಾದ್ಯಂತ 500 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆ.ಪಿ.ಎಸ್) ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳೂ ತುಂಬಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳಿಗೆ ಉತ್ತಮ ಬೇಡಿಕೆ ಇದೆ. ಇದಕ್ಕೆ ಕಾರಣ ಮಕ್ಕಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದಾಗಿದೆ.
ಈ ಶಾಲೆಗಳಲ್ಲಿ ಮಕ್ಕಳು 01 ರಿಂದ 12 ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣ ಪಡೆದು ಹೊರಬರುತ್ತಾರೆ. ಬರುವ ಶೈಕ್ಷಣಿಕ ವರ್ಷದಿಂದ ಕೆ.ಪಿ.ಎಸ್. ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿಯಿಂದ ಶಿಕ್ಷಣ ನೀಡಲಾಗುವುದು. ಇದರಿಂದ ಮಕ್ಕಳ ಕಲಿಕೆಯಲ್ಲಿ ಯಾವುದೇ ಅಡೆ ತಡೆಗಳು ಬರುವುದಿಲ್ಲ. ಸ್ಥಳೀಯ ಶಾಸಕರುಗಳ ಅಭಿಪ್ರಾಯ ಪಡೆದು ಮೇಲ್ದೆರ್ಜೆಗೇರಿಸುವ ಶಾಲೆಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಸಿ.ಎಸ್.ಆರ್. ನಿಧಿ ಬಳಸಿ ಹೆಚ್ಚಿನ ಕೊಠಡಿಗಳೂ, ಪ್ರಯೋಗಾಲಯ, ವೃತ್ತಿ ಶಿಕ್ಷಣ, ಸುಸಜ್ಜಿತ ಶೌಚಾಲಯ ಮೂಲಭೂತ ಸೌಕರ್ಯ ಕಲ್ಪಿಸಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಎಲ್ಲಾ ವಿಷಯ ಶಿಕ್ಷಕರು, ದೈಹಿಕ, ಚಿತ್ರಕಲೆ, ಸಂಗೀತ ಶಿಕ್ಷಕರು ಕೆಪಿಎಸ್ ಶಾಲೆಗಳಲ್ಲಿ ಇರಲಿದ್ದಾರೆ. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇರಬೇಕಾದ್ದು ಸಹ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗಳನ್ನೇ ಮೇಲ್ದರ್ಜೆಗೇರಿಸಿಲು ಆಯ್ಕೆ ಮಾಡಲಾಗುವುದು. ಈ ಪಟ್ಟಿಯನ್ನು ಸ್ಥಳೀಯ ಶಾಸಕರ ಮೂಲಕ ಅನುಮೋದನೆ ಪಡೆದುಕೊಳ್ಳಲಾಗುವುದು. ಶಾಸಕರು ಬದಲಾವಣೆ ಸೂಚಿಸಿದರೆ ಪಟ್ಟಿಯಲ್ಲಿ ಮಾರ್ಪಡು ಸಹ ಮಾಡಲಾಗುವುದು ಎಂದರು.
ಮುಂದಿನ ಐದು ವರ್ಷಗಳಲ್ಲಿ 3,000 ಸಾವಿರ ಕೆ.ಪಿ.ಎಸ್ ಶಾಲೆ ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ. ರಾಜ್ಯದಲ್ಲಿ 6,000 ಸಾವಿರ ಗ್ರಾಮ ಪಂಚಾಯಿತಿಗಳು ಇದ್ದು, ತಲಾ ಎರಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಂದು ಕೆ.ಪಿ.ಎಸ್ ಶಾಲೆ ತೆರೆಯಲಾಗುವುದು. ಈ ಗುರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಆಶಯವನ್ನು ಸಚಿವ ಎಸ್. ಮಧು ಬಂಗಾರಪ್ಪ ವ್ಯಕ್ತಪಡಿಸಿದರು.
ಮರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರುವ ಗುರಿ:
ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗಳಿಗೆ ಕರೆತಂದು ಉಚಿತ ಶಿಕ್ಷಣ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಆಹಾರವು ಶಿಕ್ಷಣದ ಜೊತೆಗೆ ಅತಿ ಮುಖ್ಯ ಅಂಶವಾಗಿದೆ. ಹಾಗಾಗಿ ಶಾಲಾ ಮಕ್ಕಳಿಗೆ ಬಿಸಿ ಊಟ ನೀಡಲಾಗುತ್ತಿದೆ. ಇದರೊಂದಿಗೆ ಉಚಿತ ಸಮವಸ್ತ್ರ, ಮೊಟ್ಟೆ, ಪಠ್ಯ ಪುಸ್ತಕ, ಮೊಟ್ಟೆ ತಿನ್ನದವರಿಗೆ ಶೇಂಗಾ ಚಿಕ್ಕಿಯನ್ನು ಮಕ್ಕಳಿಗೆ ಕೊಡಲಾಗುತ್ತಿದೆ. ಹಿಂದೆ ಮಕ್ಕಳಿಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು, ಇದೀಗ ಎರಡು ಮೊಟ್ಟೆಯನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆಯಾದ ಬಳಿಕ ಬಹಳಷ್ಟು ಬದಲಾವಣೆ ಕಂಡುಬರುತ್ತಿವೆ. ದಾನಿಗಳು ನೀಡಿದ ಕಂಪ್ಯೂಟರ್, ಯು.ಪಿ.ಎಸ್‍ಗಳು ಸದ್ಬಳಕೆಯಾಗುತ್ತಿವೆ. ಹಲವು ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಂಜೆಯ ವೇಳೆ ವಿಶೇಷ ತರಗತಿಗಳನ್ನು ಶಿಕ್ಷಕರು ನಡೆಸುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ಪೆನ್ನು ಹಿಡಿಯುವ ಕೈಯಲ್ಲಿ ಕಸಬರಿಕೆ ನೀಡೋದಿಲ್ಲ :
ಶಾಲಾ ಮಕ್ಕಳ ಕೈಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕುರಿತು ಅನೇಕ ಮಾಧ್ಯಮ ವರದಿಗಳು ಪ್ರಕಟವಾಗಿವೆ. ಇದು ಖೇದಕರ ಸಂಗತಿ. ಪೆನ್ನು ಹಿಡಿಯುವ ಮಕ್ಕಳ ಕೈಯಲ್ಲಿ ಕಸಬರಕೆ ನೀಡುವ ಸಂಸ್ಕøತಿ ಸರ್ಕಾರದ್ದಲ್ಲ. ಹಾಗೇಯೇ ಶಿಕ್ಷಕರು ಸಹ ಕಸಬರಿಕೆ ಹಿಡಿಯಬಾರದು. ಈ ನಿಟ್ಟಿನಲ್ಲಿ ಶಾಲೆಗಳ ಸ್ವಚ್ಛತೆಗೆ ಸಂಬಂಧಿಸಿದ ಅನುದಾನವನ್ನು ಮುಖ್ಯಮಂತ್ರಿಗಳು ದ್ವಿಗುಣ ಗೊಳಿಸಿದ್ದಾರೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಸಚಿವ ಎಸ್.ಮಧು ಬಂಗಾರಪ್ಪ ಆಶ್ವಾಸನೆ ನೀಡಿದರು.
3 ಹಂತದ ಪರೀಕ್ಷಾ ನೀತಿ ಯಶಸ್ವಿ:
ಶಿಕ್ಷಣ ಸಚಿವರಾದ ಸಂದರ್ಭದಲ್ಲಿ 3 ಹಂತದ ಪರೀಕ್ಷಾ ನೀತಿ ಜಾರಿಗೊಳಿಸಿದ್ದಕ್ಕೆ ಟೀಕೆ, ಟಿಪ್ಪಣಿ ಎದುರಾದವು. ಆದರೆ 3 ಹಂತದ ಪರೀಕ್ಷಾ ನೀತಿ ಯಶಸ್ವಿಯಾಗಿದೆ. ಕಳೆದ ಬಾರಿ ಪಿಯು ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 1.20 ಲಕ್ಷ ಮಕ್ಕಳ ಪೈಕಿ, 42 ಸಾವಿರ ಮಕ್ಕಳು ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಇದರಿಂದ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗಿದೆ. ಕಡಿಮೆ ಅಂಕ ಗಳಿಸಿದ ಮಕ್ಕಳು ಸಹ, ಪೂರಕ ಪರೀಕ್ಷೆ ಎದುರಿಸಿ ಉತ್ತಮ ಅಂಕ ಗಳಿಸಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಲೋಪದೋಷಗಳು ಕಡಿಮೆಯಾದಂತೆ ಮರಳಿ 2 ಹಂತದ ಪರೀಕ್ಷಾ ನೀತಿಯನ್ನು ಮರು ಜಾರಿಗೆ ತರಲಾಗುವುದು. ಶಾಲಾ ಮಕ್ಕಳ ಪುಸ್ತಕದ ಹೊರೆ ಇಳಿಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ವಿಭಾಗಿಸಲಾಗಿದೆ ಎಂದು ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ನೀಟ್ ತರಬೇತಿ ನೀಡಲು ಅನುದಾನಕ್ಕೆ ಬೇಡಿಕೆ:
ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಉಚಿತ ನೀಟ್ ತರಬೇತಿ ನೀಡಲು ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಸೆಂಟರ್‍ಗಳಿಗೆ ತೆರಳಿ ದುಬಾರಿ ಶುಲ್ಕ ನೀಡಿ ತರಬೇತಿ ಪಡೆಯುವುದು ತಪ್ಪಲಿದೆ. ಮುಖ್ಯಮಂತ್ರಿಗಳು ಅನುದಾನ ನೀಡುವ ಭರವಸೆ ಇದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪೂರ್ಣಾವಧಿ ಶಿಕ್ಷಕರ ನೇಮಕಕ್ಕೆ ಕ್ರಮ :
ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 12,000 ಪದವಿಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರಿಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಸೋಮವಾರ ತೆರವು ಗೊಳಿಸಲಾಗಿದೆ. ರಾಜ್ಯ ಅಡ್ವೊಕೇಟ್ ಜನರಲ್ ಬಳಿ ಅಭಿಪ್ರಾಯ ಪಡೆದು ನೇಮಕಾತಿ ಪ್ರಕ್ರಿಯನ್ನು ಪೂರ್ಣಗೊಳಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ 11 ಶಿಕ್ಷಕರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಬಾಕಿಯಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗ್ಯಾರೆಂಟಿ ಯೋಜನೆಗಳು ಯಶಸ್ವಿ :
ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ರಾಜ್ಯ ದಿವಾಳಿಯಾಗುವುದು ಎಂದು ಟೀಕೆಗಳು ಕೇಳಿ ಬಂದಿದ್ದವು. ಆದರೆ ಇದಕ್ಕೆ ವಿರುದ್ಧವಾಗಿ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳು ಶೇ.92 ರಷ್ಟು ಅರ್ಹ ಜನರಿಗೆ ತಲುಪುತ್ತಿವೆ. ಶಕ್ತಿ ಯೋಜನೆಯಡಿ 150 ಕೋಟಿಗೂ ಅಧಿಕ ಮಹಿಳೆಯರು ರಾಜ್ಯದ ಬಸ್‍ಗಳಲ್ಲಿ ಉಚಿತವಾಗಿ ಸಂಚಾರ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಚಿವ ಮಧು ಬಂಗಾರಪ್ಪ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.