ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.27) : ಸರ್ಕಾರದ ವತಿಯಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಲವಾರು ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಹಾಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಸಲಹೆ ನೀಡಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಮತ್ತು ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡಗಳು ಮುಖ್ಯ ಅಭಿಯಂತರ ಬಿ.ಟಿ.ಕಾಂತರಾಜ್ ಅವರ ವಯೋನಿವೃತ್ತಿ ನಿಮಿತ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ ಮಣ್ಣಿನ ಗುಣ ಅದ್ಭುತ. ಈ ಮಣ್ಣಿನ ಋಣ ತೀರಿಸುವುದು ಸುಲಭದ ಮಾತಲ್ಲ. ಗ್ರಾಮೀಣ ಭಾಗದ ಜನರಿಗೆ ಆದ್ಯತೆ ನೀಡಿ ಕೆಲಸ ನಿರ್ವಹಿಸಿದ್ದೇನೆ. ಗ್ರಾಮೀಣ ಭಾಗದ ಸಮಸ್ಯೆಗಳು ನನಗೆ ಗೊತ್ತು. ಹಾಗಾಗಿ ಗ್ರಾಮೀಣ ಪ್ರದೇಶಗಳತ್ತ ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿದ್ದೇನೆ ಎಂದರು.
ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ನನ್ನ ಕುಟುಂಬದವರು, ಸಂಬಂಧಿಕರು ಉತ್ತಮ ಸಹಕಾರ ನೀಡಿದ್ದಾರೆ.
ಈ ಉತ್ತಮ ಸಹಕಾರದಿಂದಲೇ ನಾನು ಉನ್ನತಹುದ್ದೆಗೇರಲು ಸಾಧ್ಯವಾಯಿತು. 38 ವರ್ಷ 6 ತಿಂಗಳ ಕಾಲ ಸರ್ಕಾರದ ಸೇವೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ನಿವೃತ್ತಿ ಜೀವನವನ್ನು ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಲೋಕೋಪಯೋಗಿ ಇಲಾಖೆ ನಿವೃತ್ತ ಸರ್ಕಾರದ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ಲೋಕೋಪಯೋಗಿ ಇಲಾಖೆ ವತಿಯಿಂದ ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಅವರು ತಾಳ್ಮೆಯಿಂದ ಕೆಲಸ ನಿರ್ವಹಿಸಿ, ಇಲಾಖೆಯ ಗೊಂದಲಗಳನ್ನು ಪರಿಹರಿಸಿ, ಕೆಲವು ದಿಕ್ಸೂಚಿ ನೀಡಿದ್ದಾರೆ. ರಾಜ್ಯದಲ್ಲಿ ದೊಡ್ಡ ದೊಡ್ಡ ರಸ್ತೆಗಳನ್ನು ಮಂಜೂರಾತಿ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದ ಅವರು, ಕೃಷ್ಣಾರೆಡ್ಡಿ ಅಧಿಕಾರಿಗಳಾಗಿ ಮಾತ್ರವಲ್ಲದೇ ವೈಯಕ್ತಿಕ ಬದುಕಿನಲ್ಲಿಯೂ ಯಶಸ್ಸು ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ಮುಖ್ಯ ಎಂಜಿನಿಯರ್ ಕೆ.ದುರುಗಪ್ಪ ಮಾತನಾಡಿ, ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಮತ್ತು ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡಗಳು ಮುಖ್ಯ ಅಭಿಯಂತರ ಬಿ.ಟಿ.ಕಾಂತರಾಜ್ ಅವರು ಲೋಕೋಪಯೋಗಿ ಇಲಾಖೆಯ ದಿಗ್ಗಜರು ಇದ್ದಂತೆ. ಚಾಕಚಕ್ಯತೆ, ಲವಲವಿಕೆ ಹಾಗೂ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದರು.
ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತ ಕೆ.ಜಿ.ಜಗದೀಶ್ ಮಾತನಾಡಿ, ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಕುಗ್ರಾಮದಲ್ಲಿ ಹುಟ್ಟಿ ಬೆಳೆದು ಮಹತ್ತರವಾದ ಸಾಧನೆ ಮಾಡಿದ್ದಾರೆ. ಬಡವರು, ರೈತರು, ದೀನದಲಿತರ ಕಷ್ಟಕಾರ್ಪಣ್ಯಗಳನ್ನು ಕಣ್ಣಾರೆ ನೋಡಿ ಬೆಳೆದವರು. ಈ ನಿಟ್ಟಿನಲ್ಲಿ ಅವರು ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿದ್ದಾರೆ. ಅಪಾರ ಶ್ರಮ ಹಾಗೂ ಆಸಕ್ತಿವಹಿಸಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು, ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಗುಣಗಾನ ಮಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಕೃಷ್ಣಾರೆಡ್ಡಿ ಅವರ ಪಾತ್ರ ಹಿರಿದು’ ಎಂದು ಹೇಳಿದರು.
ಸತೀಶ್ ಬಾಬು ಮಾತನಾಡಿ, ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾರೆಡ್ಡಿ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಸಹಕಾರ ನೀಡಿದರೆ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧೀಕ್ಷಕ ಅಭಿಯಂತರ ಎಸ್.ರಮೇಶ್, ಕಾರ್ಯಪಾಲಕ ಅಭಿಯಂತರ ಟಿ.ಎಸ್.ಮಲ್ಲಿಕಾರ್ಜುನ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಸುಮಾ ಕೃಷ್ಣಾರೆಡ್ಡಿ, ಗೋಪಿಕಾ ಬಿ.ಟಿ.ಕಾಂತರಾಜ್ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆದಾರರು ಮತ್ತಿತರರು ಇದ್ದರು.