ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ. ಜೋಡಿಚಿಕ್ಕೇನಹಳ್ಳಿ ಮುಖ್ಯ ಶಿಕ್ಷಕ ರಂಗಸ್ವಾಮಿಯನ್ನು ಅಮಾನತು ಮಾಡಿ, ಡಿಡಿಪಿಐ ರವಿಶಂಕರ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ದಸರಾ ಹಬ್ಬದ ರಜೆಯಲ್ಲಿದ್ದ ಮಕ್ಕಳು ರಜೆ ಮುಗಿಸಿ ಖುಷಿಯಿಂದಾನೇ ಶಾಲೆಗಳಿಗೆ ಮರಳಿದ್ದರು. ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ವಚ್ಛತೆಯ ಕೆಲಸ ಮಾಡಲು ಸೂಚಿಸಿದ್ದಾರೆ. ಈ ವೇಳೆ ಶೌಚಾಲಯ ತೊಳೆಯಲು ಸೂಚನೆ ನೀಡಲಾಗಿದೆ. ಈ ವೇಳೆ ಸಿಂಚನಾ ಶೌಚಾಲಯ ತೊಳೆಯುತ್ತಿರುವುದನ್ನು ನೋಡಲು ಹೋಗಿದ್ದಾಳೆ. ಇಷ್ಟಕ್ಕೆ ಕೋಪಗೊಂಡ, ಶಿಕ್ಷಕ ರಂಗಸ್ವಾಮಿ, ಶೌಚಾಲಯ ತೊಳೆಯಲು ಇಟ್ಟಿದ್ದ ಆ್ಯಸಿಡ್ ತೆಗೆದುಕೊಂಡು ಸಿಂಚನಾ ಮೇಲೆ ಎಸೆದಿದ್ದಾರೆ.
ಇದರ ಪರಿಣಾಮ ಸಿಂಚನಾ ಬೆನ್ನಿಗೆ ಗಾಯವಾಗಿದೆ. ತಕ್ಷಣಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಂಗಸ್ವಾಮಿ ಅವರೇ ಆಸ್ಪತ್ರೆಗೂ ಸೇರಿಸಿದ್ದರು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಪಾಕೇಟ್ ಕಟ್ ಮಾಡಿದ್ದಾಗ, ಸಿಂಚನಾ ಮೇಲೆ ಬಿದ್ದಿದೆ ಅಷ್ಟೇ ಎಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ ರಂಗಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಮಗಳಿಗೆ ಈ ರೀತಿ ಮಾಡಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಿಂಚನಾ ಪೋಷಕರು ಒತ್ತಾಯಿಸಿದ್ದರು. ಇದೀಗ ಮುಖ್ಯ ಶಿಕ್ಷಕ ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ, ಆದೇಶ ಹೊರಡಿಸಿದ್ದಾರೆ. ಸಿಂಚನಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಜೆ ಮುಗಿಸಿಕೊಂಡು ಸರ್ಕಾರಿ ಶಾಲೆಗಳಿಗೆ ತೆರಳುವ ಮಕ್ಕಳ ಕೈಯಿಂದಾನೇ ಸ್ವಚ್ಚತೆ ಮಾಡಿಸುವುದು ಸಾಮಾನ್ಯ. ಆದರೆ ಮಕ್ಕಳಿಂದ ಸಾಧ್ಯವಾಗದೆ ಇರುವ ಕೆಲಸವನ್ನು ಶಿಕ್ಷಕರು ಮಾಡಿಸುವುದು ಅಪಾಯಕ್ಕೆ ಕಾರಣವಾಗುತ್ತದೆ. ಶೌಚಾಲಯದ ಸ್ವಚ್ಛತೆ ಮಕ್ಕಳಿಂದ ಸಾಧ್ಯವಾ ಎಂಬುದನ್ನು ಶಿಕ್ಷಕರು ಯೋಚನೆ ಮಾಡಬೇಕಾಗುತ್ತದೆ.