ಡಿಸೆಂಬರ್ 5ರಂದು ಬಿಜೆಪಿ ನಾಯಕ ಸಿಪಿ ಯೋಗೀಶ್ವರ್ ಅವರ ಬಾವ ಮಹದೇವಯ್ಯ ಅವರ ಕೊಲೆಯಾಗಿತ್ತು. ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಹದೇವಯ್ಯ ಅವರನ್ನು ಹುಡುಕಿ ಹೊರಟ ಎರಡು ದಿನದಲ್ಲಿ ಅವರು ಕೊಲೆಯಾಗಿದ್ದು, ಬೆಳಕಿಗೆ ಬಂದಿತ್ತು. ಅಂದಿನಿಂದ ಪೊಲೀಸರು ತನಿಖೆ ನಡೆಸುತ್ತಲೇ ಇದ್ದಾರೆ. ಮಹದೇವಯ್ಯ ಅವರನ್ನು ಯಾವ ಕಾತಣಕ್ಕೆ ಕೊಲೆ ಮಾಡಲಾಗಿದೆ..? ಕೊಲೆ ಮಾಡಿದ್ದು ಯಾರು..? ಎಂಬ ಹುಡುಕಾಟ ಶುರುವಾಗಿತ್ತು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದರು.
ಇದೀಗ ಪ್ರಕರಣ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಹದೇವಯ್ಯ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ತಮಿಳುನಾಡು ಮೂಲದ ಮುರುಗೇಶ್ (40) ಬಂಧಿತ ಆರೋಪಿಯಾಗಿದ್ದಾನೆ. ಮುರುಗೇಶ್ ಜೊತೆಗೆ ಇನ್ನಿಬ್ಬರು ಆರೋಪಿಗಳು ಸೇರಿಕೊಂಡು ಈ ಕೊಲೆ ಮಾಡಲಾಗಿದೆ. ಹಣದ ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಮುರುಗೇಶ್, ಈ ಹಿಂದೆ ಯೋಗೇಶ್ವರ್ ಸಹೋದರ ಗಂಗಾಧರ್ ಎಂಬುವವರ ತೋಟದ ಕಾವಲುಗಾರನಾಗಿದ್ದ. ಮಹದೇವಯ್ಯನವರ ತೋಟದ ಪಕ್ಕದಲ್ಲಿದ್ದ ಈ ತೋಟದಲ್ಲಿ ಪತ್ನಿಯ ಸಮೇತ ನೆಲೆಸಿದ್ದ. ಆದರೆ ಈತನನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ತೋಟದಲ್ಲಿ ಕೆಲಸ ಮಾಡುವಾಗ ಕಾವಲುಗಾರ ಮುರುಗೇಶ್, ಮಹದೇವಯ್ಯನವರ ವಿಶ್ವಾಸ ಗಳಿಸಿದ್ದ. ಜಮೀನು ಮಾರಿರುವ ಹಿನ್ನೆಲೆಯಲ್ಲಿ ಮಹದೇವಯ್ಯ ಬಳಿ ಅಪಾರವಾದ ಹಣವಿದೆ ಎಂಬ ಮಾಹಿತಿ ಆತನಿಗೆ ಗೊತ್ತಿತ್ತು. ಹೀಗಾಗಿ ಕಿಡ್ನಾಪ್ ಮಾಡಿ, ಕೊಲೆ ಮಾಡಲಾಗಿತ್ತು. ಫೋನ್ ಬಳಕೆ ಮಾಡದ ಆರೋಪಿಗಳನ್ನು ಹಿಡಿಯುವುದು ಬಹಳ ಕಷ್ಟವಾಗಿತ್ತು. ಆದರೆ ಅದರಲ್ಲಿ ಒಬ್ಬ ಆರೋಪಿ, ಹಾವು ಕಚ್ಚಿದ್ದ ಮೇಲೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾನೆ. ಆಗ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಪರಾರಿಯಾಗಲು ಯತ್ನಿಸಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ.