ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾವೂ ಭರವಸೆ ನೀಡಿದ್ದ ಗ್ಯಾರಂಟಿಗಳನ್ನೆಲ್ಲಾ ಈಡೇರಿಸುತ್ತಿದೆ. ಆದರೆ ಅದಕ್ಕೆ ಕೋಟ್ಯಾಂತರ ರೂಪಾಯಿ ಹಣವಂತು ಖರ್ಚು ಆಗಿದೆ. ಈ ಹಣವನ್ನೆಲ್ಲಾ SC/ST ಸಮುದಾಯಕ್ಕೆಂದು ನೀಡಬೇಕಿದ್ದ ಅನುದಾನದಿಂದ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
SC, ST ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ ಸುಮಾರು 11,144 ಕೋಟಿ ಹಣವನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಆರೋಪಿಸಿದ ಬೆನ್ನಲ್ಲೇ ಮೂರು ಹಂತದಲ್ಲಿ ಹೋರಾಟ ಮಾಡಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. SC/ST ಅನುದಾನ ಬಳಕೆ ಮಾಡದಿದ್ದರೆ ಮೂರು ಹಂತದಲ್ಲಿ ಹೋರಾಟ ಮಾಡಿ, ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 25ರಿಂದ ಅಕ್ಟೋಬರ್ 10ರ ತನಕ ಮೊದಲ ಹಂತದ ಜನಾಂದೋಲನ, ಅಕ್ಟೋಬರ್ 11 ರಿಂದ 25ರ ತನಕ ಎರಡನೇ ಹಂತದಲ್ಲಿ ಜಿಲ್ಲೆಗಳಲ್ಲಿ ಸಚಿವರು, ಶಾಸಕರಿಗೆ ಮುತ್ತಿಗೆ, ನವೆಂಬರ್ 2ನೇ ವಾರದಲ್ಲಿ ಮೂರನೇ ಹಂತದಲ್ಲಿ ಹರಿಹರದ ಬಿ ಕೃಷ್ಣಪ್ಪ ಅವರ ಸಮಾಧಿಯಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತುಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.