ಬೆಂಗಳೂರು: ಇಂದು ಬೆಳಗ್ಗೆ 24 ಸಚಿವರು ನೂತನವಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಸಂಪೂರ್ಣವಾಗಿದೆ. ಆದ್ರೆ ಇದರ ಮಧ್ಯೆ ಸಂಪುಟಕ್ಕೆ ಸೇರಿದ ಎಲ್ಲರಿಗೂ ಕಾಂಗ್ರೆಸ್ ಸರ್ಕಾರ ಈಗಾಗಲೇ ಖಾತೆ ಹಂಚಿಕೆ ಮಾಡಿದೆ ಎನ್ನಲಾಗಿದೆ. ಅದರ ಆದೇಶ ಕಾಪಿ ಕೂಡ ಎಲ್ಲಾ ಕಡೆ ಹರಿದಾಡುತ್ತಿದೆ.
ಆದರೆ ಇದು ನಿಜಕ್ಕೂ ಕಾಂಗ್ರೆಸ್ ಸರ್ಕಾರದಿಂದ ಅಧಿಕೃತವಾದಂತ ಖಾತೆ ಹಂಚಿಕೆ ಎಂದುಕೊಂಡರೆ ಅದು ಸುಳ್ಳು. ಸದ್ಯ ಖಾತೆ ಹಂಚಿಕೆ ವಿಚಾರವಾಗಿ ಹರಿದಾಡುತ್ತಿರುವ ಆದೇಶ ಪ್ರತಿ ನಕಲಿಪಟ್ಟಿಯಾಗಿದೆ. ಈ ಸಂಬಂಧ ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, “ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ. ಯಾರು ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗೆ ಕಿವಿಗೊಡಬೇಡಿ. ಸರ್ಕಾರ ಅಧಿಕೃತ ಖಾತೆ ಹಂಚಿಕೆ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ” ಎಂದು ಟ್ವೀಟ್ ಮಾಡಿ ತಿಳಿಸಿದೆ.