ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಬರದಲ್ಲಿ ಬಸವಣ್ಣನವರ ಬಗ್ಗೆ ಮಾತನಾಡಿದ್ದರು. ಯತ್ನಾಳ್ ಅವರ ಮಾತು ವೈರಲ್ ಆಗುತ್ತಿದ್ದಂತೆ ಲಿಂಗಾಯತ ಸಮುದಾಯದವರು ರೊಚ್ಚಿಗೆದ್ದಿದ್ದಾರೆ. ಯತ್ನಾಳ್ ವಿರುದ್ಧ ಗರಂ ಆಗಿದ್ದಾರೆ. ಯತ್ನಾಳ್ ಅವರು ಕ್ಷಮೆ ಕೇಳುವಂತೆ ಒತ್ತಡ ಹಾಕಿದ್ದಾರೆ.
ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಬಣ ಟಾರ್ಗೆಟ್ ಮಾಡಿತ್ತು. ಯಡಿಯೂರಪ್ಪ ಹಾಗೂ ಸನ್ಸ್ ವಿರುದ್ಧ ತಿರುಗಿ ಬಿದ್ದಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಯತ್ನಾಳ್ ಬಣ ಹಾಗೂ ವಿಜಯೇಂದ್ರ ಬಣದ ನಡುವೆ ಜೋರು ಮಾತಿನ ಯುದ್ಧವೇ ನಡೆಯುತ್ತಿತ್ತು. ಮಾತಿನ ಬರದಲ್ಲಿ ಬಸವಣ್ಣನವರ ಬಗ್ಗೆ ಮಾತನಾಡಿದ್ದಾರೆ. ಇದು ಲಿಂಗಾಯತ ಸಮುದಾಯದವರನ್ನ ಕೆರಳಿಸಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಖಂಡಿಸಿದೆ. ಈ ರೀತಿಯ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕೆಂದು ಯತ್ನಾಳ್ ಗೆ ಎಚ್ಚರಿಕೆಯನ್ನು ಕೊಟ್ಟಿದೆ.
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಸಹ ಗುಡುಗಿದ್ದಾರೆ. ಅವರು ನಮ್ಮ ಸಮುದಾಯದ ಬಾಂಧವರು ಎಂಬ ಕಾರಣಕ್ಕೆ ಅವರ ಹುಚ್ಚಾಟಗಳನ್ನೆಲ್ಲಾ ಇಲ್ಲಿಯವರೆಗೆ ಸಹಿಸಿಕೊಂಡಿದ್ದೆವು. ಅವರೇ ಹುಚ್ಚಾಟ ನಿಲ್ಲಿಸದೆ ಇದ್ದಲ್ಲಿ ಸಮಾಜವೇ ಇದಕ್ಕೆ ಕಡಿವಾಣ ಹಾಕಲಿದೆ. ಅವರ ಹೇಳಿಕೆಗಳು, ಅವರು ನಡೆದುಕೊಳ್ಳುವ ರೀತಿ ನೋಡಿದರೆ ಅವರು ವೀರಶೈವ ಲಿಂಗಾಯತರು ಹೌದೇ ಎನ್ನುವ ಅನುಮಾನ ಬರುತ್ತದೆ. ವೀರಶೈವ ಲಿಂಗಾಯತರಿಗೆ ಇರಬೇಕಾದ ಆಚಾರ, ಸಂಸ್ಕಾರ ಅವರಲ್ಲಿ ಕಾಣಿಸದೆ ಇರುವುದು ದುರದೃಷ್ಟಕರ. ಅಗ್ಗದ ಪ್ರಚಾರಕ್ಕಾಗಿ, ರಾಜಕೀಯದ ತೆವಲಿಗಾಗಿ ಈ ರೀತಿಯ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದೇ ಹೇಳಿದ್ದಾರೆ.