ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.20: ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಪತ್ರಾಂಕಿತ ಸಹಾಯಕ ಜಿ.ಸಂತೋಷ್ ಕುಮಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಎಲ್ಲಾ ಜಾತಿಯವರು ಸರ್ಕಾರದ ಯೋಜನೆಗಳಲ್ಲಿ ಸಮ ಪಾಲು ಪಡೆಯಬೇಕಾಗಿರುವುದರಿಂದ ಆಯಾ ಸಮುದಾಯಗಳ ವಸ್ತುಸ್ಥಿತಿ ಅರಿಯುವುದು ಮುಖ್ಯ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮಟ್ಟದ ಆಧಾರದ ಮೇಲೆ ಸರ್ಕಾರ ಯಾವ್ಯಾವ ಜಾತಿಗೆ ಎಷ್ಟು ಮೀಸಲಾತಿ ನೀಡಬೇಕು ಎನ್ನುವುದು ನಿರ್ಧಾರವಾಗುತ್ತದೆ. 2014 ರಲ್ಲಿ ಕಾಂತರಾಜ್ ಆಯೋಗ ನೇಮಿಸಿ ಜಾತಿಗಣತಿಗೆ ಆದೇಶಿಸಲಾಗಿದೆ. 2018 ರಲ್ಲಿ ವರದಿ ಸಿದ್ದಪಡಿಸಿದ್ದರೂ ಕಾರಣಾಂತರಗಳಿಂದ ಇನ್ನು ಜಾರಿಗೆ ಬಂದಿಲ್ಲ. 2 ಬಿ. ಮೀಸಲಾತಿ ಪ್ರಮಾಣವನ್ನು ಶೇ.8 ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಮಾತನಾಡುತ್ತ ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ಹಾಗೂ ತದ ನಂತರ ಬಂದ ಬಿಜೆಪಿ ಸರ್ಕಾರಗಳು ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ಆಸಕ್ತಿ ವಹಿಸದ ಕಾರಣ ಇನ್ನು ಮೂಲೆಗುಂಪಾಗಿ ಉಳಿದಿದೆ. ಬಿಹಾರ ರಾಜ್ಯದಲ್ಲಿ ಜಾತಿ ಗಣತಿಯನ್ನು ಎರಡೆ ವರ್ಷಗಳಲ್ಲಿ ಪೂರ್ಣಗೊಳಿಸಿ ಜಾರಿಗೆ ತಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾತಿ ಗಣತಿಯನ್ನು ಬಿಡುಗಡೆಗೊಳಿಸಿದರೆ ಮುಸ್ಲಿಂ ಜನಾಂಗಕ್ಕೆ ಸಿಗಬೇಕಾದ ಸೂಕ್ತ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ ಎಂದು ವಿನಂತಿಸಿದರು.
ಹಿಂದಿನ ಕೋಮುವಾದಿ ಬಿಜೆಪಿ ಸರ್ಕಾರ ಮುಸ್ಲಿಂರ ಮೇಲಿನ ದ್ವೇಷಕ್ಕಾಗಿ 2 ಬಿ. ಮೀಸಲಾತಿಯನ್ನು ಏಕಾಏಕಿ ರದ್ದುಪಡಿಸಿದೆ. ಸದ್ಯಕ್ಕೆ ಮೀಸಲಾತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಬಿಜೆಪಿ. ಸರ್ಕಾರ ರದ್ದುಗೊಳಿಸಿದ್ದ 2 ಬಿ. ಮೀಸಲಾತಿಯನ್ನು ಮತ್ತೆ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ನವೀದ್ ಅಬ್ದುಲ್ಲಾ, ಗೌರವ ಸಲಹೆಗಾರ ಸುಭಾನುಲ್ಲಾ, ಎ.ಜಾಕೀರ್‍ಹುಸೇನ್, ಫಾಜಿಲ್, ಜಾವೀದ್, ಯಾಸಿನ್, ಮುನ್ನಾ, ಟಿ.ಶಫಿವುಲ್ಲಾ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.