ಟೋಬಿ ಸಿನಿಮಾ ವರಮಹಾಲಕ್ಷ್ಮೀ ಹಬ್ಬದ ದಿನ ಅಂದ್ರೆ ಆಗಸ್ಟ್ 25 ರಂದು ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿದೆ. ಹಾಗಂತ ಸಿನಿಮಾ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಬರೀ ಟೋಬಿ ಮಾತ್ರವಲ್ಲ, ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಧೂಳೆಬ್ಬಿಸಿದ ಸಿನಿಮಾಗಳು ಕೂಡ ಕೆಲವರಿಗೆ ಇಷ್ಟವಾಗಿಲ್ಲ. ಸಿನಿಮಾ ವಿಚಾರದಲ್ಲಿ ಅವರವ ಭಾವನೆಗಳನ್ನು ಗೌರವಿಸಲೇಬೇಕಾಗುತ್ತದೆ. ಆದರೆ ಥಿಯೇಟರ್ ಮುಂದೆ ಯುವತಿಯೊಬ್ಬರು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಅಷ್ಟಕ್ಕೆ ಕೋಪಗೊಂಡ ಅಲ್ಲಿದ್ದ ಹುಡುಗರು ಯುವತಿಯ ಮೇಲೆ ಮುಗಿಬಿದ್ದಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಪೊಲೀಸರನ್ನ ಕರೆಸ್ತೀಯಾ ಕರೆಸು ಎಂಬುದಾಗೆಲ್ಲ ಮಾತನಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಗಮನಕ್ಕೂ ಬಂದಿದೆ. ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.

“ಅವರು ನಮ್ಮ ಸಿನಿಮಾ ಟೀಂನವರಲ್ಲ. ಆದರೂ ನಾನೂ ಕ್ಷಮೆ ಕೇಳುತ್ತೇನೆ. ಸಿನಿಮಾ ಕೂಡ ವಿಮರ್ಶೆಗೆ ಒಳಪಡುವ ಮಾಧ್ಯಮವೇ ಸರಿ. ಸಿನಿಮಾವನ್ನು ದುಡ್ಡು ಕೊಟ್ಟು ನೋಡುವ ಪ್ರೇಕ್ಷಕರಿಗೆ ತಮಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ಇದೆ. ಅದನ್ನು ಒಪ್ಪುವುದಕ್ಕೆ ನಾವೂ ಸ್ವತಂತ್ರರು. ಅದನ್ನು ಒಪ್ಪದೆ ಆ ಯುವತಿಗೆ ಕಿರುಕುಳ ನೀಡಲು ಪ್ರಯತ್ನಿಸಬಾರದು. ಈ ವಿಡಿಯೋದಲ್ಲಿರುವ ವ್ಯಕ್ತಿಗಳಿಗೂ ಹಾಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ ಆ ಯುವತಿ ಅನುಭವಿಸಿದ ಕಿರುಕುಳಕ್ಕೆ ನಾನು ಕ್ಷಮೆಕೇಳುತ್ತೇನೆ” ಎಂದು ಬರೆದಿದ್ದಾರೆ.

